ಟೀಂ ಇಂಡಿಯಾ ಪರ ಧೋನಿ ಆಟ ಮುಗಿದಿದೆ- ಹರ್ಭಜನ್ ಸಿಂಗ್

Public TV
2 Min Read
MS Dhoni Harbhajan Singh

ನವದೆಹಲಿ: ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಕಮ್‍ಬ್ಯಾಕ್ ಹಾಗೂ ನಿವೃತ್ತಿಯ ಬಗ್ಗೆ ಭಾರೀ ಚರ್ಚೆ ನಡೆದಿದೆ. ಇಂತಹ ಸಮಯದಲ್ಲೇ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಧೋನಿ ಮತ್ತೆ ಟೀಂ ಇಂಡಿಯಾ ಪರ ಆಟಲ್ಲ ಎಂದು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಜೊತೆಗಿನ ಇನ್‍ಸ್ಟಾಗ್ರಾಮ್ ಲೈವ್ ಚಾಟ್‍ನಲ್ಲಿ ಭಜ್ಜಿ ಈ ವಿಚಾರವಾಗಿ ಮಾತನಾಡಿದ್ದಾರೆ. “ಐಪಿಎಲ್ ಫ್ರಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತಿ ಕ್ಯಾಂಪ್‍ನಲ್ಲಿದ್ದಾಗ ಅನೇಕರು ನನಗೆ, ಎಂ.ಎಸ್.ಧೋನಿ ಟೀಂ ಇಂಡಿಯಾ ಪರ ಮತ್ತೆ ಆಡುತ್ತಾರಾ? ಟಿ20 ವಿಶ್ವಕಪ್‍ನಲ್ಲಿ ಭಾಗವಹಿಸುತ್ತಾರಾ ಎಂದು ಪ್ರಶ್ನಿಸಿದ್ದರು. ಆದರೆ ನಾನು, ಈ ಬಗ್ಗೆ ನನಗೆ ಗೊತ್ತಿಲ್ಲ. ಎಂ.ಎಸ್.ಧೋನಿ ಅವರಿಗಷ್ಟೇ ಗೊತ್ತು. ಆಡಬೇಕೊ ಬೇಡವೋ ಎಂಬುದು ಅವರ ನಿರ್ಧಾರ ಅಂತ ಉತ್ತರಿಸಿದ್ದೆ” ಎಂದು ಹರ್ಭಜನ್ ಸಿಂಗ್ ನೆನೆದಿದ್ದಾರೆ.

harbhajan singh dhoni bcci

ಮುಂದುವರಿದು ಮಾತನಾಡಿದ ಭಜ್ಜಿ, “ಎಂ.ಎಸ್.ಧೋನಿ ಐಪಿಎಲ್ 2020 ಟೂರ್ನಿಯಲ್ಲಿ ಆಡುವುದು ಶೇ.100ರಷ್ಟು ಖಚಿತ. ಆದರೆ ಟೀಂ ಇಂಡಿಯಾ ಪರ ಆಡಲು ಬಯಸುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಬೇಕಿದೆ. ನನ್ನ ಪ್ರಕಾರ ಅವರು ಆಡುವುದಿಲ್ಲ. ಭಾರತ ತಂಡದ ಪರ ಅವರು ಆಟ ಮುಗಿಸಿದ್ದಾರೆ. ಮತ್ತೆ ನೀಲಿ ಜರ್ಸಿಯನ್ನು ಧರಿಸುವುದಿಲ್ಲ ಎಂದು ಭಾವಿಸಿರುವೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿ ರೋಹಿತ್ ಶರ್ಮಾ, ಧೋನಿ ಕಮ್‍ಬ್ಯಾಕ್ ಬಗ್ಗೆ ನಮಗೆ ಯಾವುದೇ ಸುದ್ದಿ ತಿಳಿದಿಲ್ಲ. 2018ರ ಜುಲೈನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಅವರ ಯಾವುದೇ ವಿಚಾರ ನಮಗೆ ತಿಳಿದಿಲ್ಲ” ಎಂದಿದ್ದಾರೆ.

dhoni 7 jersey

2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‍ನ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಧೋನಿ ಕ್ರಿಕೆಟ್‍ನಿಂದ ದೂರ ಉಳಿದಿದ್ದಾರೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಕಮ್‍ಬ್ಯಾಕ್ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಕೊರೊನಾ ವೈರಸ್‍ನಿಂದಾಗಿ ಟೂರ್ನಿ ಕೂಡ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

ಧೋನಿ ಅವರ ನಿವೃತ್ತಿ ವಿಚಾರ ಮುನ್ನೆಲೆಯಲ್ಲಿ ಇದ್ದಾಗಲೇ ಮೇ 27ರಂದು ಸಂಜೆ ಟ್ವಿಟ್ಟರ್ ನಲ್ಲಿ ಧೋನಿ ನಿವೃತ್ತಿ ಬಗ್ಗೆ #DhoniRetires ಎಂಬ ಹ್ಯಾಸ್‍ಟ್ಯಾಗ್ ಬಳಸಿ ಟ್ರೆಂಡ್ ಹುಟ್ಟುಹಾಕಲಾಗಿತ್ತು. ಇದನ್ನು ಕಂಡು ಕೋಪಗೊಂಡ ಸಾಕ್ಷಿ, ಇದೊಂದು ಸಳ್ಳು ಸುದ್ದಿ. ಈ ಲಾಕ್‍ಡೌನ್ ಸಮಯದಲ್ಲಿ ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದು ಖಾರವಾಗಿ ಪ್ರತಿಕ್ರಿಯಿಸಿದ್ದರು. ನಂತರ ಈ ಟ್ವೀಟ್ ಡಿಲೀಟ್ ಕೂಡ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *