ಚೆನ್ನೈ: ಟೀಂ ಇಂಡಿಯಾ ಆಲ್‍ರೌಂಡರ್ 29 ವರ್ಷದ ವಿಜಯ್ ಶಂಕರ್ ಗುರುವಾರ ತಮ್ಮ ಗೆಳತಿ ವೈಶಾಲಿ ವಿಶ್ವೇಶ್ವರನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್‍ಸ್ಟಾದಲ್ಲಿ ನಿಶ್ಚಿತಾರ್ಥದ ಫೋಟೋ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾದ ಹಲವು ಆಟಗಾರರು ಸೇರಿದಂತೆ ಅಭಿಮಾನಿಗಳು ವಿಜಯ್ ಶಂಕರ್ ಅವರಿಗೆ ಶುಭ ಕೋರಿದ್ದಾರೆ. 2019ರ ವಿಶ್ವ ತಂಡದ ಆಟಗಾರನಾಗಿದ್ದ ವಿಜಯ್ ಶಂಕರ್ ಗೆ ಕೆಎಲ್ ರಾಹುಲ್, ಚಹಲ್, ಕರುಣ್ ನಾಯರ್ ಸೇರಿದಂತೆ ಹಲವು ಆಟಗಾರರು ಅಭಿನಂದನೆ ತಿಳಿಸಿದ್ದಾರೆ.
ವಿಜಯ್ ಶಂಕರ್ ಟೀಂ ಇಂಡಿಯಾ ಪರ ಇದುವರೆಗೂ 12 ಏಕದಿನ, 9 ಟಿ20 ಪಂದ್ಯಗಳನ್ನಾಡಿದ್ದು, 2018ರಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಸದ್ಯ ಯುಎಇನಲ್ಲಿ ನಡೆಯಲಿರುವ ಐಪಿಎಲ್ 2020 ಟೂರ್ನಿಯಲ್ಲಿ ಹೈದರಾಬಾದ್ ತಂಡದ ಕಣಕ್ಕಿಳಿಯುತ್ತಿದ್ದಾರೆ.
2019ರ ವಿಶ್ವಕಪ್ ತಂಡದಲ್ಲಿ ಅಚ್ಚರಿ ಎಂಬಂತೆ ಸ್ಥಾನ ಪಡೆದ ವಿಜಯ್ ಶಂಕರ್ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಅರ್ಧದಲ್ಲೇ ಹಿಂದಿರುಗಿದ್ದರು. ಕಳೆದ ವರ್ಷದ ತಮಿಳುನಾಡು ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿಜಯ್ ಶಂಕರ್, ಐಪಿಎಲ್ ಟೂರ್ನಿಯಲ್ಲಿ ತಮ್ಮ ಫಾರ್ಮ್ ನಿರೂಪಿಸಿ ಮತ್ತೆ ಆಯ್ಕೆ ಸಮಿತಿಯ ಗಮನ ಸೆಳೆಯುವ ಉದ್ದೇಶವನ್ನು ಹೊಂದಿದ್ದಾರೆ.