ಹೈದರಾಬಾದ್: ತೆಲುಗು ಸಿನಿಮಾರಂಗದ ಖ್ಯಾತ ಹಾಸ್ಯ ನಟ ಜಯಪ್ರಕಾಶ್ ರೆಡ್ಡಿ (74) ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಟ ಜಯಪ್ರಕಾಶ್ ರೆಡ್ಡಿ ಇಂದು ಬೆಳಗ್ಗೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ತನ್ನ ನಿವಾಸದಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಯಪ್ರಕಾಶ್ ರೆಡ್ಡಿ ಅವರು ಬಾತ್‍ರೂಮಿನಲ್ಲಿ ಕುಸಿದು ಬಿದ್ದಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನ ಕೊನೆಯುಸಿರೆಳೆದಿದ್ದಾರೆ.
ಹಿರಿಯ ನಟನ ಸಾವಿನ ಸುದ್ದಿ ತಿಳಿದು ಟಾಲಿವುಡ್ ನಟ-ನಟಿಯರು ಸೇರಿದಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.
ಜಯಪ್ರಕಾಶ್ 1988ರಲ್ಲಿ ‘ಬ್ರಹ್ಮ ಪುತ್ರಡು’ ಸಿನಿಮಾದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಜಯಪ್ರಕಾಶ್ ಹಾಸ್ಯ ನಟ, ಖಳ ನಟ ಸೇರಿದಂತೆ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದು, ಸುಮಾರು 100ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ನಟ ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ಅಭಿನಯಿಸಿದ್ದರು.