ಬೆಂಗಳೂರು: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ನಡುವೆಯೇ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಈ ವೇಳೆ ಸದನದಲ್ಲಿ ಮಾಸ್ಕ್ ಹಾಕಿಕೊಳ್ಳದೇ ಭಾಷಣ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್ ಅವರನ್ನು ತಡೆದ ಸ್ಪೀಕರ್ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದರು.
ಲಾಕ್‍ಡೌನ್ ವೇಳೆ ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದರು. ಈ ಕುರಿತು ಭಾಷಣ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆದರೆ ಈ ವೇಳೆ ಮಾಸ್ಕ್ ಧರಿಸದಿರುವುದನ್ನು ಗಮನಿಸಿದ ಸ್ಪೀಕರ್ ಅವರು, ಮಾರ್ಷಲ್‍ಗಳಿಂದ ಮಾಸ್ಕ್ ತರಿಸಿ ಡಿಕೆ ಶಿವಕುಮಾರ್ ಅವರಿಗೆ ನೀಡಿದರು. ಆ ಬಳಿಕ ನಂತರ ಮಾಸ್ಕ್ ಧರಿಸಿ ಡಿಕೆಶಿ ಮಾತು ಮುಂದುವರೆಸಿದರು.
ಶಿವಕುಮಾರ್ ಅವರೇ ನೀವು ಜೋರಾಗಿ ಮಾತಾಡುತ್ತಿದ್ದೀರಿ. ಅದರಿಂದ ಬೇರೆಯವರಿಗೆ ಸಮಸ್ಯೆ ಆಗಬಾರದು ಎಂದು ಮಾಸ್ಕ್ ಧರಿಸಲು ಸೂಚಿಸಿದೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.
ಫುಡ್‍ಕಿಟ್ ವಿತರಣೆಯಲ್ಲಿ ಕಿಟ್ ಮೇಲೆ ಬಿಜೆಪಿ ನಾಯಕರ ಫೋಟೋ ಹಾಕಿದ್ದಾರೆ. ಶಾಸಕ ಅರವಿಂದ ಲಿಂಬಾವಳಿ ಅವರು ಪ್ರಧಾನಿಗಳು, ಸಿಎಂ ಹಾಗೂ ತನ್ನ ಫೋಟೋ ಹಾಕಿ ಹಂಚಿದ್ದಾರೆ. ಬಡವರು, ಬಾಣಂತಿಯರಿಗೆ ಕೊಡುವ ಆಹಾರದ ಕಿಟ್ ಅದು. ಅಲ್ಲದೇ ಫುಡ್ ಕಿಟ್ ಅವ್ಯವಹಾರದ ಬಗ್ಗೆಯೂ ಸರ್ಕಾರಕ್ಕೆ ಗಮನಕ್ಕೆ ತಂದ್ದಿದ್ದೇವೆ. ಆದರೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಅದರ ಬಗ್ಗೆ ಒಂದು ತನಿಖೆ ಮಾಡಿಸಿಲ್ಲ ಎಂದು ಡಿಕೆಶಿ ಆರೋಪಿಸಿದರು.
ರಾಜಕಾರಣ ಮಾಡೋಣ, ಚುನಾವಣೆ ಬರುತ್ತೆ ಹೋಗುತ್ತೆ. ಆದರೆ ಬಡವರ ವಿಷಯದಲ್ಲಿ ಫೋಟೋ ಹಾಕಿಕೊಂಡು ರಾಜಕಾರಣ ಮಾಡಿದರೆ, ಇದಕ್ಕಿಂದ ಅವಮಾನ ಸಂಗತಿ ಮತ್ತೊಂದು ಇಲ್ಲ. ಲಾಕ್‍ಡೌನ್ ನಿಂದ 6 ರಿಂದ 8 ತಿಂಗಳಿನಿಂದ ಜನರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಕೇವಲ 4 ಗಂಟೆಯಲ್ಲಿ ಪ್ರಧಾನಿಗಳು ಲಾಕ್‍ಡೌನ್ ಮಾಡಿ, ಗಂಟೆ ಬಾರಿಸಲು, ದೀಪ ಹಚ್ಚಲು 4 ದಿನಗಳ ಸಮಯಕೊಟ್ಟರು. ಅದನ್ನು ಸಂತೋಷದಿಂದ ಸ್ವೀಕರ ಮಾಡಿದ್ದೇವು. ಆದರೆ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ನೆರವು ಸರ್ಕಾರ ಕೊಟ್ಟಿಲ್ಲ. ರೈತರಿಗೆ ಪರಿಹಾರ ಘೋಷಣೆ ಮಾಡಿದ್ರಿ, ಎಷ್ಟು ಜನರಿಗೆ ಎಷ್ಟು ರೂಪಾಯಿ ಪರಿಹಾರ ಕೊಟ್ಟಿದ್ದೀರಿ ಎಂಬ ಲೆಕ್ಕ ಕೊಡಿ ಎಂದು ಆಗ್ರಹಿಸಿದರು.