ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿಗೆ ಸಂಜನಾ ಕಣ್ಣೀರ ವಿದಾಯ ಹೇಳಿದ್ದಾರೆ.
ಇಂದು ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಜನಾ, ರಾಗಿಣಿ ಜೊತೆ ಆರೋಪಿಗಳನ್ನು 1ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ರಾಗಿಣಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ನಟಿ ಸಂಜನಾರನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಿತು.
ವಿಧಿವಿಜ್ಞಾನ ಕೇಂದ್ರದಲ್ಲಿ ಒಬ್ಬರನ್ನೊಬ್ಬರು ಬಿಟ್ಟು ಹೋಗುವಾಗ ಇಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಜನಾ ಕಣ್ಣೀರು ಹಾಕಿ ರಾಗಿಣಿಗೆ ವಿದಾಯ ಹೇಳಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೂ ಮೊದಲು ಇಬ್ಬರ ಸಂಬಂಧ ಅಷ್ಟಕ್ಕಷ್ಟೇ ಇತ್ತು. ಆದರೆ ಕಳೆದ 8 ದಿನಗಳಿಂದ ರಾಗಿಣಿ ಮತ್ತು ಸಂಜನಾ ಒಂದಾಗಿದ್ದರು. ಮೊದ ಮೊದಲು ಇಬ್ಬರ ನಡುವೆ ಅಸಮಾಧಾನವಿದ್ದರೂ ನಂತರ ಇಬ್ಬರು ಜೊತೆಯಾಗಿದ್ದರು. ಇದನ್ನೂ ಓದಿ: ದಿನ ಬೆಳಗ್ಗೆ ಎದ್ದರೆ ದೇವರು ನೋಡುವುದು ಬಿಟ್ಟು ಅದು ನೋಡುವುದೇ ಆಗಿದೆ: ರೇವಣ್ಣ
ರೀಲ್ ನಲ್ಲಿ ಪೊಲೀಸ್ ಆಗಿದ್ದ ರಾಗಿಣಿ ಇಂದು ರಿಯಲ್ಲಾಗಿ ಖೈದಿಯಾಗುತ್ತಿದ್ದಾರೆ. ರಾಗಿಣಿ ಐಪಿಎಸ್ ಚಿತ್ರದಲ್ಲಿ ಕಾಪ್ ರೋಲ್ ನಲ್ಲಿ ರಾಗಿಣಿ ಮಿಂಚಿಸಿದ್ದಾರೆ.
ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರನ್ನು ವಾಹನದಲ್ಲಿ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಈ ಮೂಲಕ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲುಪಾಲದ ಮೊದಲ ನಟಿ ಎಂಬ ಕುಖ್ಯಾತಿಗೆ ರಾಗಿಣಿ ಪಾತ್ರವಾಗಿದ್ದಾರೆ.