– ತ್ರಿಶೂಲದಿಂದ ಹುಂಡಿ ಬೀಗ ಮುರಿದು ಕಳ್ಳತನ
ಮಡಿಕೇರಿ: ಮೈಗಂಟಿಸಿಕೊಂಡ ಚಾಳಿ ಸುಟ್ರೂ ಹೋಗಲ್ಲಾ ಈ ಮಾತಿಗೆ ಪುಷ್ಠಿ ನೀಡುವಂತೆ ಕಳ್ಳನೊಬ್ಬ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ದೇವಾಲಯಕ್ಕೆ ಕನ್ನ ಹಾಕಿ ಸಿಕ್ಕಿ ಬಿದ್ದಿರುವ ಘಟನೆಯೊಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾಮದಲ್ಲಿ ನಡೆದಿದೆ.
ಬಂಧಿತ ಆರೋಪಿ ಕಾರ್ತಿಕ್ ಆಗಿದ್ದಾನೆ. ಈತ ಈ ಹಿಂದೆ ಅಮ್ಮತ್ತಿಯ ಪುರೋಹಿತರೊಬ್ಬರ ಮನೆಗೆ ನುಗ್ಗಿ ಕಳ್ಳತನ ಮಾಡಿದ ಆರೋಪದಡಿ ಕಾರ್ತಿಕ್ ಬಂಧಿಯಾಗಿದ್ದ. ಇದೀಗ ಮತ್ತೆ ದೇವಾಲಯದ ಹುಂಡಿಗೆ ಕೈ ಹಾಕುವ ಮೂಲಕ ಪೊಲೀಸರ ಅತಿಥಿಯಾಗಿದ್ದಾನೆ.
Advertisement
ಕಳ್ಳತನದ ಆರೋಪದಡಿ ಕಾರ್ತಿಕ್ ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ಬಂಧಿಯಾಗಿದ್ದ ಆತ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರ ಬಂದವನೇ ಹೊಸ ಜೀವನದ ಕನಸು ಕಾಣುವ ಬದಲು ವಿರಾಜಪೇಟೆ ತಾಲೂಕಿನ ಕದನೂರು ಗ್ರಾಮದ ಶ್ರೀಭಗವತಿ ದೇವಾಲಯಕ್ಕೆ ಕನ್ನ ಹಾಕುವ ಸ್ಕೆಚ್ ಹಾಕಿದ್ದಾನೆ.
Advertisement
Advertisement
ರಾತ್ರಿ ದೇವಾಲಯದ ಆವರಣಕ್ಕೆ ನುಗ್ಗಿದ ಚೋರ ಅಲ್ಲಿದ್ದ ತ್ರಿಶೂಲದಿಂದ ಹುಂಡಿಯ ಬೀಗವನ್ನು ಮುರಿದು ಸಾವಿರಾರು ರೂ. ಕಾಣಿಕೆ ಹಣವನ್ನು ಚೀಲದಲ್ಲಿ ತುಂಬಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದನು. ಆದರೆ ಪೊಲೀಸರಿಗೆ ಕಳ್ಳನನ್ನು ಪತ್ತೆ ಹಚ್ಚುವ ಕಾರ್ಯ ಕಷ್ಟವೆನಿಸಲಿಲ್ಲ. ದೇವಾಲಯದಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳಿಗೆ ದೇವಾಲಯಕ್ಕೆ ಕನ್ನ ಹಾಕಿದವನು ಜೈಲಿನಿಂದ ಬಿಡುಗಡೆಯಾದ ಕಾರ್ತಿಕ್ ಎನ್ನವುದು ಖಾತ್ರಿಯಾಗಿದೆ.
Advertisement
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ತಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಬಳಿಯಿಂದ ಸುಮಾರು 5,600 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ದೇವಾಲಯಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೇವಾಲಯ ಆಡಳಿತ ಮಂಡಳಿಗಳು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.