ಜೂನ್ 14ರಿಂದ ಉಚಿತ ಇ-ಟಿಕೆಟ್ ಮೂಲಕ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ದರ್ಶನ

Public TV
1 Min Read
Kateel

– ರಾಜ್ಯದಲ್ಲೇ ಮೊದಲ ಪ್ರಯೋಗ

ಮಂಗಳೂರು: ಲಾಕ್‍ಡೌನ್ ನಂತರ ಈಗಾಗಲೇ ಹಲವು ದೇವಾಲಯಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲೂ ಜೂನ್ 14ರ ಭಾನುವಾರದಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಆದರೆ ಭಕ್ತರು ದೇವಸ್ಥಾನದ ವೆಬ್‍ಸೈಟ್‍ನಿಂದ ಉಚಿತವಾಗಿ ಇ-ಟಿಕೆಟ್ ಮೂಲಕ ತಮ್ಮ ದರ್ಶನದ ಅವಕಾಶವನ್ನು ಕಾದಿರಿಸಬೇಕಾಗುತ್ತದೆ. ದೇವಸ್ಥಾನವೊಂದು ದೇವರ ದರ್ಶನಕ್ಕೆ ಇ-ಟಿಕೆಟ್ ಮೂಲಕ ಕಾದಿರಿಸುವ ವ್ಯವಸ್ಥೆ ಮಾಡಿರುವುದು ರಾಜ್ಯದಲ್ಲೇ ಮೊದಲ ಪ್ರಯೋಗವಾಗಿದೆ. ದೇವರ ದರ್ಶನಕ್ಕೆ ಸರ್ಕಾರ ಕೆಲವೊಂದು ನಿಯಮಗಳನ್ನು ರೂಪಿಸಿರುವುದರಿಂದ ಇದನ್ನು ಪಾಲಿಸಲು ಕಟೀಲು ದೇವಸ್ಥಾನದಲ್ಲಿ ಕೊಂಚ ಕಷ್ಟವಾಗಿತ್ತು.

kateel shree durgaparameshwari

ಭಕ್ತರ ಭೇಟಿಯ ಸಂದರ್ಭ ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಬೇಕಾಗಿರುವುದರಿಂದ ಭಕ್ತರ ಸರತಿ ಸಾಲಿನ ವ್ಯವಸ್ಥೆಗೆ ಸ್ಥಳಾವಕಾಶದ ಕೊರತೆ ಇತ್ಯಾದಿ ಸಮಸ್ಯೆಗಳಿಗೆ ಸಿದ್ಧತೆಯ ಅಗತ್ಯ ಇತ್ತು. ಹಾಗಾಗಿ ಕಳೆದ ಜೂನ್ 8ರಂದು ಕಟೀಲು ದೇಗುಲ ಭಕ್ತರ ದರ್ಶನಕ್ಕೆ ತೆರೆದಿರಲಿಲ್ಲ. ಇದೀಗ ಜೂನ್ 14ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಲು ದೇಗುಲದ ವಠಾರದಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ಬಾಕ್ಸ್ ಹಾಕಲಾಗಿದೆ. ಇ-ಪಾಸ್ ವ್ಯವಸ್ಥೆಗೂ ಸಿದ್ಧತೆ ಮಾಡಲಾಗಿದ್ದು, ಪ್ರಾಯೋಗಿಕವಾಗಿಯೂ ನೋಡಲಾಗಿದೆ ಎಂದು ದೇವಸ್ಥಾನದ ಅಡಳಿತ ಮಂಡಳಿ ತಿಳಿಸಿದೆ.

kateel temple koti japa 2

ಭಕ್ತರು ವೆಬ್‍ಸೈಟ್ ಮೂಲಕ ನೋಂದಾಯಿಸಿ ದೇಗುಲಕ್ಕೆ ಬರಬಹುದಾಗಿದೆ. ಪ್ರತಿ ಹದಿನೈದು ನಿಮಿಷಕ್ಕೆ ಅರವತ್ತು ಮಂದಿಯಷ್ಟು ದೇವಾಲಯಕ್ಕೆ ಭೇಟಿ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 7.30ರಿಂದ ಸಂಜೆ 7.30ರತನಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸ್ಥಳೀಯ ಭಕ್ತರಿಗೆ ಇ-ಪಾಸ್ ಇಲ್ಲದೆ ದೇಗುಲಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಬೆಳಿಗ್ಗೆ ಗಂಟೆ 6ರಿಂದ 7.30ರವರೆಗಿನ ಒಂದೂವರೆ ಗಂಟೆ ಸಮಯ ನಿಗದಿಪಡಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಿ ಭಕ್ತರನ್ನು ಒಳ ಬಿಡಲಾಗುತ್ತದೆ. ಆದರೆ ಅನ್ನಪ್ರಸಾದ ಸೇರಿದಂತೆ ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *