– ಬಾಲಕಿ ಸಮಯಪ್ರಜ್ಞೆಗೆ ಭಾರೀ ಪ್ರಶಂಸೆ
– ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ
ಉಡುಪಿ: ಚಲಿಸುತ್ತಿದ್ದ ಕಾರು ಕೆರೆಗೆ ಬಿದ್ದು ಚಾಲಕ ಮೃತಪಟ್ಟು ಕಾರಿನಲ್ಲಿದ್ದ ಯುವತಿ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದಾಳೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬಾರ್ಕೂರಲ್ಲಿ ಈ ಘಟನೆ ನಡೆದಿದೆ.
ಬಾರ್ಕೂರಿನ ಚೌಳಿಕೆರೆಗೆ ಕಾರು ಉರುಳಿ ಉದ್ಯಮಿ ಸಂತೋಷ್ ಶೆಟ್ಟಿ ಎಂಬವರು ಸ್ಥಳದಲ್ಲೇ ಮೃತರಾಗಿದ್ದರು. ಕಾರಿನಲ್ಲಿ ಜೊತೆಗಿದ್ದ ಸಂಸ್ಥೆಯ ಉದ್ಯೋಗಿ ಶ್ವೇತಾ ಅಪಘಾತದಿಂದ ಪವಾಡ ಸದೃಶ ರೂಪದಲ್ಲಿ ಬಚಾವಾಗಿದ್ದು, ಯುವತಿ ಶ್ವೇತಾಳನ್ನು ಬದುಕಿಸಿದ ವೀಡಿಯೋ ಸಿಕ್ಕಿದೆ.
Advertisement
Advertisement
ನೀರು ತುಂಬಿದ್ದ ಕೆರೆಗೆ ಕಾರು ಬಿದ್ದಾಗ ಇಬ್ಬರೂ ಮುಳುಗಿದ್ದರು. ಸಂತೋಷ್ ಸ್ಥಳದಲ್ಲೇ ಸತ್ತರೆ, ಯುವತಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಳು. ಈ ವೇಳೆ ಸ್ಥಳೀಯ ಬಾಲಕಿ ಸಮಯಪ್ರಜ್ಞೆಯಿಂದ ಶ್ವೇತಾ ಬದುಕಿ ಬಂದಿದ್ದಾಳೆ. ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಯುವತಿ ಕೊನೆಗೂ ಬಚಾವಾಗಿದ್ದಾಳೆ. ಸಮಯ ಪ್ರಜ್ಞೆ ಮೆರೆದು ಯುವತಿಗೆ ಮರುಜೀವ ಕೊಟ್ಟ ಬಾಲಕಿಯ ಹೆಸರು ನಮನ. ಶ್ವೇತಾಳನ್ನು ಮೇಲಕ್ಕೆ ಎತ್ತಿದ ತಕ್ಷಣ ಎದೆಗೆ ಒತ್ತಡ ಹಾಕಿ ಚೇತರಿಸಿಕೊಳ್ಳುವಂತೆ ಮಾಡಿದ್ದಾಳೆ. ಪ್ರಾಥಮಿಕ ಚಿಕಿತ್ಸೆ ನೀಡಿ ಉಸಿರು ಮರಳುವಂತೆ ಮಾಡಿದ ಈಕೆ ಮತ್ತು ಸ್ಥಳೀಯ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Advertisement
Advertisement
ಘಟನೆ ವೇಳೆ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವೀಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ. ಈಕೆ ಲಿಟಲ್‍ರಾಕ್ ಶಾಲೆಯಲ್ಲಿ 10ನೇ ತರಗತಿ ಕಲಿಯುತ್ತಿದ್ದಾಳೆ. ಪ್ರಥಮ ಚಿಕಿತ್ಸೆ ಮೂಲಕ ದೇಹದಿಂದ ನೀರು ಹೊರ ಹಾಕಿದ ಬಳಿಕವೇ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರೂ ನಮನಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ್ದಲ್ಲದಿದ್ದರೆ ಜೀವಕ್ಕೇ ಅಪಾಯ ಇತ್ತು ಎಂದು ವೈದ್ಯರು ಹೇಳಿದ್ದಾರೆ.
ವಿದ್ಯಾರ್ಥಿನಿ ನಮನ ಮಾತನಾಡಿ, ಮನೆಯಲ್ಲಿದ್ದಾಗ ಜೋರಾಗಿ ಶಬ್ದ ಕೇಳಿತು. ಸುತ್ತಮುತ್ತ ಇದ್ದ ಎಲ್ಲರೂ ಓಡಿ ಬಂದಿದ್ದಾರೆ. ಹಗ್ಗ ಕಟ್ಟಿ ಕೆಳಗೆ ಇಳಿಯಲಾಯ್ತು. ಮಹಿಳೆಯನ್ನು ಕೆರೆಯಿಂದ ಮೇಲಕ್ಕೆತ್ತಲಾಯ್ತು. ಚಾಲಕರು ಕಾರೊಳಗೆ ಸಿಲುಕಿದ್ದರು. ಹೊಟ್ಟೆಯಿಂದ ನೀರು ತೆಗೆದು, ಎದೆ ಒತ್ತಿ ಉಸಿರು ಬರುವಂತೆ ಮಾಡಿದೆವು. ಕೆರೆಗೆ ಆವರಣ ಗೋಡೆ ನಿರ್ಮಿಸಿದರೆ ಅವಘಡ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾಳೆ.