ಶಿವಮೊಗ್ಗ : ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇದೆ. ಜಿಲ್ಲೆಯಲ್ಲಿ ಇದೇ ರೀತಿ ಕೊರೊನಾ ನಿಯಂತ್ರಣದಲ್ಲಿ ಇಡಲು ಅಗತ್ಯ ಕ್ರಮ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೊರೊನಾ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ಈಶ್ವರಪ್ಪ, ಜಿಲ್ಲೆಯಲ್ಲಿ ಕೊರೊನ ನಿರೋಧಕ ಲಸಿಕೆ ಹಾಕಲು ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಲಸಿಕೆ ಖಾಲಿಯಾಗುತ್ತಿದೆ ಎನ್ನುವಾಗಲೇ ತರಿಸಿಕೊಳ್ಳಬೇಕು. ಜಿಲ್ಲೆಗೆ ಎರಡೂ ಹಂತ ಸೇರಿ 10 ಲಕ್ಷ ಡೋಸ್ ಲಸಿಕೆ ಬೇಕಾಗುತ್ತದೆ. ಅದರಲ್ಲಿ ಈವರೆಗೆ ಮೊದಲ ಹಂತದಲ್ಲಿ 1.70 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. ಎರಡನೇ ಹಂತದಲ್ಲಿ 18,000 ಡೋಸ್ ಲಸಿಕೆ ಹಾಕಲಾಗಿದೆ. ಇನ್ನೂ ಸುಮಾರು 8 ಲಕ್ಷ ಡೋಸ್ ಲಸಿಕೆ ಅಗತ್ಯವಿದೆ. ಅದಕ್ಕೆ ಕೊರತೆ ಆಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಯಾರೂ ಕೂಡ ಲಸಿಕೆ ಇಲ್ಲವೆಂದು ಮತ್ತೆ, ಮತ್ತೆ ಆಸ್ಪತ್ರೆಗಳಿಗೆ ತಿರುಗಾಡುವ ಸ್ಥಿತಿ ಬರಬಾರದು. ಒಂದೊಮ್ಮೆ ಲಸಿಕೆ ಪಡೆಯಲು ನಾಗರೀಕರು ಬಂದಾಗ ಖಾಲಿ ಆಗಿದ್ದರೆ ಮರುದಿನ ಮೊದಲನೇಯದಾಗಿಯೇ ಅಂತವರಿಗೆ ನೀಡಬೇಕು. ಲಸಿಕೆ ಯಾವಾಗ, ಯಾವ ಸಮಯಕ್ಕೆ ದೊರೆಯುತ್ತದೆ ಎಂಬ ಮಾಹಿತಿ ಕೂಡ ತಿಳಿಸಬೇಕು. ಲಸಿಕೆ ಕೊರತೆಯಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ 12 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 257 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೊರೊನಾ ತಗುಲಿದವರಿಗೂ ಉತ್ತಮ ಚಿಕಿತ್ಸೆ ನೀಡಲು ಮುಂಜಾಗ್ರತಾ ಕ್ರಮವಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ.ಸಿಇಒ ಎಂ.ಎಲ್. ವೈಶಾಲಿ, ಡಿಎಚ್ ಒ ಡಾ.ರಾಜೇಶ್ ಸುರಗಿಹಳ್ಳಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.