ಬೆಂಗಳೂರು: ಸಿಡಿ ಕೇಸ್ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ರಮೇಶ್ ಜಾರಕಿಹೊಳಿ ಪ್ರಕರಣ ಇತ್ಯರ್ಥ ಆಗುವ ಲಕ್ಷಣಗಳೇ ಕಾಣುತ್ತಿಲ್ಲ. ತನಿಖೆ ಮುಗಿದು ಕೋರ್ಟ್ ಸುಪರ್ದಿಯಲ್ಲಿ ಅಂತಿಮ ವರದಿ ಇದ್ದರೂ ಅದನ್ನು ಕೆಳಹಂತದ ನ್ಯಾಯಾಲಯ ಸಲ್ಲಿಸುವುದಾಗಲಿ, ಜಾರಕಿಹೊಳಿಗೆ ಮುಕ್ತಿ ಕೊಡಿಸುವುದಾಗಲಿ ಆಗುತ್ತಿಲ್ಲ.
ಇಂದು ರಮೇಶ್ ಜಾರಕಿಹೊಳಿ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಎಸ್‍ಐಟಿ ಮುಖ್ಯಸ್ಥರು ಮೂರು ತಿಂಗಳು ರಜೆ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಇಡೀ ಪ್ರಕರಣದ ತನಿಖೆ ನಡೆದಿದೆ. ಈ ಬಗ್ಗೆ ಹೈಕೋರ್ಟ್‍ಗೆ ಕೂಡ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ. ಆದರೆ ಎಸ್‍ಐಟಿ ಮುಖ್ಯಸ್ಥರ ಗಮನದಲ್ಲಿ ಇಲ್ಲದೇ ತನಿಖೆ ಮುಕ್ತಾಯ ಆಗಿದೆ. ಹಾಗಾದರೆ ಎಸ್‍ಐಟಿ ಮುಖ್ಯಸ್ಥರನ್ನು ನೇಮಕ ಮಾಡೋದು ಯಾಕೆ ಎಂದು ಕೋರ್ಟ್ ಪ್ರಶ್ನೆ ಮಾಡಿದೆ. ಇದನ್ನೂ ಓದಿ: ನಾನೀಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ, ನನಗೂ ಒಳ್ಳೆಯ ಕಾಲ ಬರಲಿದೆ: ರಮೇಶ್ ಜಾರಕಿಹೊಳಿ
ರಜೆ ಮುಗಿಸಿಕೊಂಡು ವಾಪಸ್ ಬಂದಿರುವ ಸೌಮೆಂದು ಮುಖರ್ಜಿ ಎಸ್‍ಐಟಿ ಅಧಿಕಾರಗಳ ಜೊತೆ ಕೇಸ್ ಬಗ್ಗೆ ರಿವ್ಯೂ ಮೀಟಿಂಗ್ ಕೂಡ ಮಾಡಿಲ್ಲ. ರಿವ್ಯೂ ಮೀಟಿಂಗ್ ಮಾಡದೆ ಇದ್ದರೆ ವರದಿಯ ಬಗ್ಗೆ ಅನುಮತಿ ಇದ್ಯಾ, ಇಲ್ಲವೇ ಎಂಬ ನಿಲುವು ತಿಳಿಸುವಂತೆ 20 ನಿಮಿಷಗಳ ಕಾಲ ಹೈಕೋರ್ಟ್ ಅವಕಾಶ ನೀಡಿತ್ತು.
ಈ ನಡುವೆ ಹೈಕೋರ್ಟ್‍ಗೆ ಸೌಮೆಂದು ಮುಖರ್ಜಿ ಯಾವ ನಿಲುವನ್ನು ಸ್ಪಷ್ಟಪಡಿಸಲಿಲ್ಲ. ಹಾಗಾಗಿ, ಮುಂದಿನ ವಿಚಾರಣೆಯಲ್ಲಿ ಪ್ರಮಾಣಪತ್ರ ನೀಡುವಂತೆ ಎಸ್‍ಐಟಿ ಮುಖ್ಯಸ್ಥರಿಗೆ ಹೈಕೋರ್ಟ್ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಿದೆ.