-ಎಸ್‍ಡಿಆರ್‍ಎಫ್ ತಂಡದಿಂದ ರಕ್ಷಣಾ ಕಾರ್ಯಚರಣೆ
ಬೆಳಗಾವಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಮಹಾರಾಷ್ಟ್ರದಲ್ಲೂ ಕೂಡ ಮಳೆ ಹೆಚ್ಚಾಗಿರುವ ಪರಿಣಾಮ ಕೊಯ್ನಾ ಜಲಾಶಯ ಮತ್ತು ಬೇರೆ ಬೇರೆ ಜಲಾಶಯಗಳಿಂದ ನೀರನ್ನು ರಾಜ್ಯಕ್ಕೆ ಹರಿದು ಬಿಟ್ಟಿದ್ದಾರೆ. ಹಾಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
Advertisement
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೋಡಣಿ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. 600ಕ್ಕೂ ಹೆಚ್ಚು ಜನರಿರುವ ಈ ಗ್ರಾಮದಲ್ಲಿ ಎಲ್ಲ ಮನೆಗಳಿಗೂ ನೀರು ನುಗ್ಗಿ ಜನರ ಪರಿಸ್ಥಿತಿ ಅಸ್ತವ್ಯಸ್ಥಗೊಂಡಿದೆ. ಹಾಗಾಗಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ಮುಂದುವರಿದಿದೆ. ವೇದಗಂಗಾ ನದಿಯಿಂದ ಬರುತ್ತಿರುವಂತಹ ನೀರಿನಿಂದಾಗಿ ಸಂಪೂರ್ಣ ಗ್ರಾಮ ಜಲಾವೃತಗೊಂಡಿದೆ. ಈ ಹಿಂದೆ 2019ರಲ್ಲೂ ಕೂಡ ನಿಪ್ಪಾಣಿಯಲ್ಲಿ ಇದೆ ಪರಿಸ್ಥಿತಿ ಬಂದಿತ್ತು.
Advertisement
Advertisement
ಜಿಲ್ಲೆಯ ಹಲವು ನದಿಪಾತ್ರದ ಹಳ್ಳಿಗಳು ನೀರಿನಲ್ಲಿ ಮುಳುಗಡೆಯಾಗಿದೆ. ಹಾಗಾಗಿ ಜಿಲ್ಲೆಗೆ ಎಸ್‍ಡಿಆರ್‍ಎಫ್ ತಂಡ ಧಾವಿಸಿದೆ. ಎಸ್‍ಡಿಆರ್‍ಎಫ್‍ನ 20ಕ್ಕೂ ಹೆಚ್ಚು ಸಿಬ್ಬಂದಿ ಈಗಾಗಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದು, ಕೋಡಣಿ ಗ್ರಾಮದಲ್ಲಿ ಇಡೀ ನೀರು ಆವರಿಸಿಕೊಂಡಿರುವ ಪರಿಣಾಮ ಮನೆಯ ಮೇಲ್ಛಾವಣಿವರೆಗೆ ನೀರು ತುಂಬಿಕೊಂಡು ಮನೆಯಲ್ಲಿದ್ದ ವಸ್ತುಗಳೆಲ್ಲ ನೀರುಪಾಲಾಗಿದೆ. ಇದನ್ನೂ ಓದಿ: ಉಕ್ಕಿ ಹರಿಯುವ ವೇದಗಂಗಾ ನದಿಯಲ್ಲಿ ಯುವಕರ ಹುಚ್ಚಾಟ
Advertisement
ಗ್ರಾಮದಲ್ಲಿದ್ದ ಜನರೆಲ್ಲರೂ ಕೂಡ ತಮ್ಮ, ತಮ್ಮ ಮನೆಯಿಂದ ಹೊರಬಂದು ನೀರು ಕಡಿಮೆ ಇರುವ ಪ್ರದೇಶಗಳಲ್ಲಿ ನಿಂತಿದ್ದಾರೆ. ಇವರೆಲ್ಲರನ್ನೂ ಕೂಡ ರಕ್ಷಣೆ ಮಾಡಲು ಎಸ್‍ಡಿಆರ್‍ಎಫ್ ತಂಡ ಮುಂದಾಗಿದ್ದು, ಮೊದಲು ಮಕ್ಕಳು, ವೃದ್ಧರು ಮತ್ತು ಮಹಿಳೆಯರ ರಕ್ಷಣ ಕಾರ್ಯಚರಣೆ ನಡೆಯುತ್ತಿದೆ.
ಜುಲೈ 23ರಂದು ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ಧಾರವಾಡ, ಹಾಸನ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಭಾರೀ ದಾಖಲೆ ಪ್ರಮಾಣದ ಮಳೆಯಾಗಿದೆ. ಉತ್ತರ ಕನ್ನಡದ ಹಲವು ಭಾಗಗಳಲ್ಲಿ 24 ಗಂಟೆಗಳಲ್ಲಿಯೇ 300 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಅಂಕೋಲಾ ತಾಲೂಕಿನ ಡೋಗ್ರಿ ಪಂಚಾಯಿತಿಯಲ್ಲಿ 541 ಮಿ.ಮೀ ಮತ್ತು ಶಿರಸಿ ತಾಲೂಕಿನ ಹಲವೆಡೆ 400 ಮಿ.ಮೀ.ಗೂ ಅಧಿಕ ಮಳೆಯಾಗಿದೆ.
ಹಾಸನ ಮತ್ತು ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಉಂಟಾಗಿ ಸಂಪರ್ಕ ಕಡಿತಗೊಂಡಿದ್ದು, ಬೇಲೂರು ಮಾರ್ಗವಾಗಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮಕೈಗೊಂಡಿದೆ. ರಾಜ್ಯದ ಕರಾವಳಿ, ಮಲೆನಾಡಿಗೆ ಹೊಂದಿಕೊಂಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮುಂದಿನ 2-3 ದಿನಗಳವರೆಗೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಮುಂದಿನ ಎರಡ್ಮೂರು ದಿನ ಕೃಷ್ಣ ನದಿ ಪಾತ್ರದಲ್ಲಿ ಪ್ರವಾಹ ಹೆಚ್ಚಾಗುವ ಸಾಧ್ಯತೆ: ಆರ್.ಅಶೋಕ್
ಪ್ರವಾಹದಿಂದಾಗಿ ರಾಜ್ಯದಲ್ಲಿ ಮೂರು ಸಾವು ಆಗಿದ್ದು, ಉತ್ತರ ಕನ್ನಡದ ಇಬ್ಬರು ಕಾಣೆಯಾಗಿದ್ದಾರೆ. ರಾಜ್ಯದ 18 ತಾಲೂಕು, 131 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, 830 ಮನೆಗಳಿಗೆ ಹಾನಿಯಾಗಿದೆ. ಸದ್ಯ ರಾಜ್ಯದಲ್ಲಿ 80 ಕಾಳಜಿ ಕೇಂದ್ರ ತೆರೆಯಲಾಗಿದ್ದು, 8733 ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ.