ಮೈಸೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾಕೆ ಶಾಸಕ ಜಮೀರ್ ಅಹ್ಮದ್‍ನನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
Advertisement
ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇವಲ ಕೆಲ ಸ್ಯಾಂಡಲ್‍ವುಡ್ ನಟಿಯರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪ್ರಶಾಂತ್ ಸಂಬರಗಿ ನೇರವಾಗಿ ಹೆಸರಿಸಿರುವ ಶಾಸಕ ಜಮೀರ್ ಅಹ್ಮದ್‍ನನ್ನು ಬಂಧಿಸಿ ಯಾಕೆ ವಿಚಾರಣೆ ನಡೆಸುತ್ತಿಲ್ಲ, ಇದರ ಹಿಂದಿನ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
Advertisement
ಪ್ರಶಾಂತ್ ಸಂಬರಗಿ ಹಲವರ ಹೆಸರು ಹೇಳಿದ್ದಾರೆ. ಈ ಪಟ್ಟಿಯಲ್ಲಿ ಜಮೀರ್ ಅಹಮ್ಮದ್ ಹೆಸರು ಸಹ ಇದೆ. ಈ ವರೆಗೆ ಜಮೀರ್ ಅಹಮ್ಮದ್ ರನ್ನ ಯಾಕೆ ಬಂಧಿಸಿಲ್ಲ. ಇದರ ಹಿಂದಿನ ಉದ್ದೇಶವೇನು? ತನಿಖಾಧಿಕಾರಿಗಳಿಗೆ ಪ್ರಶಾಂತ್ ಸಂಬರಗಿ ಆರೋಪಗಳ ಮೇಲೆ ಅನುಮಾನಗಳಿದ್ದರೆ ಅವರನ್ನೂ ತನಿಖೆಗೆ ಒಳಪಡಿಸಿ. ಅವರ ಆರೋಪಗಳಿಗೆ ಪೂರಕ ದಾಖಲೆಗಳಿದ್ದರೆ ಅದನ್ನು ಸಂಗ್ರಹಿಸಿಕೊಂಡು ತನಿಖೆ ಮುಂದುವರಿಸಿ ಎಂದು ಹೇಳಿದ್ದಾರೆ.
Advertisement
Advertisement
ಪ್ರಶಾಂತ್ ಸಂಬರಗಿ ಯಾರ್ಯಾರ ಹೆಸರು ಹೇಳಿದ್ದಾರೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ಯಾರೋ ಒಬ್ಬಿಬ್ಬರು ಸಿನಿಮಾ ನಟಿಯರನ್ನು ಕೂಡಿ ಹಾಕಿ ವಿಚಾರಣೆ ನಡೆಸಿ ಕಳುಹಿಸಿದರೆ ಸರಿ ಆಗುವುದಿಲ್ಲ. ಈ ಪ್ರಕರಣ ಹೊರ ಬಂದಿದ್ದೇ ಇಂದ್ರಜಿತ್ ಲಂಕೇಶ್ ಅವರ ಧೈರ್ಯದ ನಿರ್ಧಾರದಿಂದ. ಹೀಗಾಗಿ ಅವರು ಹೇಳಿದ ಎಲ್ಲ ವಿಚಾರ ಹಾಗೂ ಮಜಲುಗಳಿಂದ ತನಿಖೆಯಾಗಬೇಕು ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರಸಿಕೊಳ್ಳುವುದೂ ಸಹಜ. ಆದರೆ ಗೃಹ ಮಂತ್ರಿಗಳು ಯಾವುದೇ ಪ್ರಭಾವಕ್ಕೆ ಮಣಿಯಲ್ಲ ಎಂದು ಹೇಳಿದ್ದಾರೆ ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದು ಪ್ರತಾಪ್ ಸಿಂಹ ಹೇಳಿದರು.
ಇದು ಶಾಲಾ, ಕಾಲೇಜುಗಳಿಗೂ ಹಬ್ಬುತ್ತಿದ್ದು, ವಿದ್ಯಾರ್ಥಿಗಳು ಡ್ರಗ್ಸ್ ದಾಸರಾಗುತ್ತಿದ್ದಾರೆ. ಇದನ್ನು ಸೇವಿಸಿದರೆ ವಾಸನೆ ಸಹ ಬರುವುದಿಲ್ಲ. ಹೀಗಾಗಿ ಯುವಕರು ಹೆಚ್ಚು ಅಡಿಕ್ಟ್ ಆಗುತ್ತಿದ್ದಾರೆ. ಈ ಸಮಾಜದ ಪಿಡುಗನ್ನು ತೊಲಗಿಸಲು ಸಮಗ್ರ ತನಿಖೆ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.