ನವದೆಹಲಿ: ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ತಾವು ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಹೃದಯಾಘಾತದಿಂದ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ವೈದ್ಯರು ತಕ್ಷಣವೇ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆ ನೀಡಿದ್ದರು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
— Kapil Dev (@therealkapildev) October 23, 2020
ಕಪಿಲ್ ದೇವ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಸೇರಿದಂತೆ ಸಿನಿಮಾ ತಾರೆಯರು, ರಾಜಕೀಯ ನಾಯಕರು, ಕ್ರೀಡಾ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿರುವ ಕಪಿಲ್ ದೇವ್ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ನನ್ನ ಆರೋಗ್ಯ ಉತ್ತಮವಾಗಿದ್ದು, ನನ್ನ ಕ್ಷೇಮಕ್ಕಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಕೃತಜ್ಞತೆ ತಿಳಿಸಿದ್ದಾರೆ.
Statement from @Fortis_Escorts on @therealkapildev ‘s health condition @EconomicTimes ???? pic.twitter.com/ERxfd1jBgE
— Teena Thacker (@Teensthack) October 23, 2020
ಟೀಂ ಇಂಡಿಯಾ ಪರ 131 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಪಿಲ್ ದೇವ್ ಅವರು, 5,248 ರನ್ ಗಳಿಸಿದ್ದು, 8 ಶತಕಗಳನ್ನು ಸಿಡಿಸಿದ್ದಾರೆ. 225 ಏಕದಿನ ಪಂದ್ಯಗಳಲ್ಲಿ 3,783 ರನ್ ಗಳಿಸಿದ್ದಾರೆ. ಅಲ್ಲದೇ ಟೆಸ್ಟ್ ನಲ್ಲಿ 434 ವಿಕೆಟ್, ಏಕದಿನ ಮಾದರಿ ಕ್ರಿಕೆಟ್‍ನಲ್ಲಿ 253 ವಿಕೆಟ್ ಪಡೆದುಕೊಂಡಿದ್ದಾರೆ. 1959 ಜನವರಿ 6 ರಂದು ಚತ್ತೀಸ್‍ಗಢದಲ್ಲಿ ಜನಿಸಿದ್ದ ಅವರು, 1978 ರ ಅಕ್ಟೋವರ್ ನಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು.
ಕಪಿಲ್ ದೇವ್ ಅವರ ಬದುಕಿನ ಕಥೆ ಆಧಾರವಾಗಿ ಬಾಲಿವುಡ್‍ನಲ್ಲಿ ’83’ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣ್‍ವೀರ್ ಸಿಂಗ್ ನಟಿಸಿದ್ದಾರೆ. ಅಲ್ಲದೇ ಕಪಿಲ್ ಅವರ ಪತ್ನಿ ರೋಮಿ ಭಾಟಿಯಾ ಆಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ. ಕೊರೊನಾ, ಲಾಕ್‍ಡೌನ್ ಕಾರಣದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ತಡವಾಗಿದೆ.