– ಸಿಎಂ ವಿರುದ್ಧ ಬಹಿರಂಗ ಅಸಮಾಧಾನ
– ಅಹ್ಮದ್ ಪಟೇಲ್ ನಿಧನಕ್ಕೆ ಸಂತಾಪ
ಮೈಸೂರು: ನಾನು ಚುನಾವಣೆಯನ್ನೇ ಬೇಡ ಎಂದಿದ್ದೆ. ಇನ್ನು ನನಗೆ ಮಂತ್ರಿ ಪಟ್ಟ ಯಾಕೆ ಬೇಕು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಸುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇದೇ ವೇಳೆ ಹಳೆ ಮೈಸೂರು ಭಾಗಕ್ಕೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂತ್ರಿ ಪಟ್ಟವನ್ನ ನಾನೇ ಬೇಡ ಎಂದಿದ್ದೇನೆ. ಚುನಾವಣೆಯನ್ನೆ ಬೇಡ ಎಂದಿದ್ದವನು ನಾನು. ಇನ್ನು ಮಂತ್ರಿ ಪಟ್ಟ ಯಾಕೇ ಬೇಕು ನನಗೆ. ನಾನು ಕೇಂದ್ರದಲ್ಲಿ ಸಚಿವಸ್ಥಾನದ ಆಕಾಂಕ್ಷಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.
Advertisement
Advertisement
ಖಾಸಗಿ ಶಾಲೆಗಳು ನಮ್ಮ ಕೈಯಲ್ಲಿ ಇದೆ. ನಾವು ಶಾಲೆಗಳ ಕೈಯಲ್ಲಿ ಇಲ್ಲ. ಆನ್ ಲೈನ್ ಕ್ಲಾಸ್ ಗೆ ಫೀಸ್ ಕಟ್ಟಿಲ್ಲ ಅಂದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಅದಕ್ಕೆ ಅವರು ಹಂಗ್ ಮಾಡಿದ್ರು ಹಿಂಗ್ ಮಾಡಿದ್ರು ಅಂತ ಕಿರುಚಾಡೋದು ಬೇಡ. ಸರ್ಕಾರ ಇಂತಹ ವಿಚಾರದಲ್ಲಿ ಗಂಭೀರವಾಗಿರಬೇಕು ಎಂದು ಸಲಹೆ ನೀಡಿದರು.
Advertisement
ಸಂಪುಟ ವಿಸ್ತರಣೆ ಹಾಗೂ ಪುನರರಚನೆ ವಿಚಾರ ಸಂಬಂಧ ಸಿಎಂ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಶ್ರೀನಿವಾಸ್ ಪ್ರಸಾದ್, ಯಡಿಯೂರಪ್ಪ ಸಿಎಂ ಆಗುವಾಗ ನನ್ನ ಪಾತ್ರ ಇತ್ತು. ಈಗ ಸಿಎಂ ಆದ್ರಲ್ಲ ಇನ್ನೇನು ಆ ದರ್ದು ಅವರಿಗೆ ಇಲ್ಲ. ಈಗ ಆರಾಮಾಗಿ ಇದ್ದಾರೆ. ನೋಡ್ಕೋತಿವಿ ಬಿಡಿ ಎಂದರು.
Advertisement
ಇದೇ ವೇಳೆ ಅಳಿಯ ಶಾಸಕ ಹರ್ಷವರ್ಧನ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡೋಲ್ಲ. ಹರ್ಷವರ್ಧನ್ ಹೇಳಿಕೆ ವೈಯುಕ್ತಿಕ. ಹಳೆ ಮೈಸೂರು ಭಾಗಕ್ಕೆ ಈಗ ಸಾಕಾಗುವಷ್ಟು ಮಂತ್ರಿ ಸ್ಥಾನ ಇದೆ. ಸಿಎಂ ಹಳೆ ಮೈಸೂರು ಭಾಗದವರೇ. ಈಶ್ವರಪ್ಪ, ನಾರಾಯಣಗೌಡ, ಎಸ್.ಟಿ ಸೋಮಶೇಖರ್ ಹಳೆಮೈಸೂರಿನವರೇ. ಇನ್ನೆಷ್ಟು ಜನರನ್ನ ಗುಡ್ಡೆ ಹಾಕಿಕೊಳ್ತೀರಾ ಎಂದು ಪ್ರಶ್ನಿಸಿದರು.
ಹರ್ಷವರ್ಧನ್ ಹೇಳಿದ್ದೇನು?
ಕೇಂದ್ರದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ಸ್ಥಾನಮಾನ ಕೊಡಿ. ಇಲ್ಲವಾದರೆ ನನಗಾದರೂ ಸಚಿವ ಸ್ಥಾನ ಕೊಡಿ ಎಂದು ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಆಗ್ರಹಿಸಿದ್ದರು. ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ಮೂಲ-ವಲಸಿಗ ಎಂದು ನೋಡಿದರೆ ಈ ಸರ್ಕಾರ ಅಧಿಕಾರಕ್ಕೆ ಬರಲು ಬರಬೇಕಾದರೆ ಮೂಲದವರು ಕಾರಣವಾಗಿರಲಿಲ್ಲ. ಬೇರೆ ಪಕ್ಷದಿಂದ ಬಂದು ಕೈ ಹಿಡಿದವರು ಇದ್ದರು. ಈಗ ಸಂಪುಟ ಪುನರ್ ರಚನೆಯಾಗುತ್ತದೋ ವಿಸ್ತರಣೆ ಆಗುತ್ತದೋ ಅದೆಲ್ಲವೂ ಸಿಎಂಗೆ ಬಿಟ್ಟ ವಿಚಾರ ಎಂದು ಹೇಳಿದ್ದರು.
ಅಹ್ಮದ್ ಪಟೇಲ್ ನಿಧನಕ್ಕೆ ಸಂತಾಪ:
ದೀರ್ಘಕಾಲದ ರಾಜಕಾರಣ ಮಾಡಿದ ರಾಜಕಾರಣಿಯನ್ನ ಕಳೆದುಕೊಂಡಿದ್ದೇವೆ. ಅವರ ನಿಧನದ ಸುದ್ದಿ ಅಘಾತ ತಂದಿದೆ. ಕಾಂಗ್ರೆಸ್‍ನಲ್ಲಿ ಉತ್ತಮ ನಾಯಕರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.