ಚುನಾಯಿತರಾಗಿ ಅಧಿಕಾರ- ಹೊಸ ದಾಖಲೆ ಬರೆದ ಪ್ರಧಾನಿ ಮೋದಿ

Public TV
3 Min Read
pm modi 1

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಚುನಾಯಿತವಾದ ಸರ್ಕಾರದ ಮುಖ್ಯಸ್ಥರಾಗಿ ಎರಡು ದಶಕಗಳನ್ನು ಪೂರೈಸಿದ್ದು, ಈ ಮೂಲಕ ವಿಶ್ವದ ಕೆಲವೇ ನಾಯಕರು ಮಾಡಿದ ಸಾಧನೆಯನ್ನು ಮೋದಿ ಮಾಡಿದಂತಾಗಿದೆ.

PM Narendra Modi

ಈ ಕುರಿತು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಚುನಾಯಿತವಾದ ಸರ್ಕಾರದ ಮುಖ್ಯಸ್ಥರಾಗಿ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ವಿಶ್ವದ ವಿರಳ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಸಹ ಒಬ್ಬರು. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯಾಗಿದೆ. ಭಾರತ ಹಾಗೂ ಜಗತ್ತು ಶಾಂತಿ, ಸುಸ್ಥಿರತೆಯಿಂದ ಸಮೃದ್ಧವಾಗಿ ಬೆಳೆಯಲು ಶ್ರಮಿಸುತ್ತಿದ್ದಾರೆ. ಅವರಿಗೆ ಇನ್ನೂ ಹೆಚ್ಚು ಶಕ್ತಿ ಬರಲಿ ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ ವಿಶ್ವದ ಇತರ ನಾಯಕರೊಂದಿಗೆ ಹೋಲಿಸಿದ ಚಿತ್ರವನ್ನು ಸಹ ರವಿಶಂಕರ್ ಪ್ರಸಾದ್ ಹಾಕಿದ್ದಾರೆ. ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ ಬುಷ್, ಫ್ರಾಂಕ್ಲಿನ್ ರೂಸ್ವೆಲ್ಟ್ ಹಾಗೂ ಇಂಗ್ಲೆಂಡ್ ಪ್ರಧಾನಿ ದಿವಂಗತ ಮಾರ್ಗರೇಟ್ ಥ್ಯಾಚರ್ ಸೇರಿದಂತೆ ವಿಶ್ವದ ಹಲವು ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ಒಟ್ಟು 6,941 ದಿನ ಆಡಳಿತ ನಡೆಸಿದ್ದಾರೆ. 4,607 ದಿನಗಳ ಕಾಲ ಗುಜರಾತ್ ಸಿಎಂ ಆಗಿ, 2,334 ದಿನ ಪ್ರಧಾನಿಯಾಗಿ ಆಡಳಿತ ನಡೆಸಿದ್ದಾರೆ. ಜವಾಹರ್ ಲಾಲ್ ನೆಹರು 6,130 ದಿನಗಳ ಕಾಲ ಆಡಳಿತ ನಡೆಸಿದ್ದಾರೆ. ಇಂದಿರಾ ಗಾಂಧಿ 5,829 ದಿನ ಕಾರ್ಯನಿರ್ವಹಿಸಿದ್ದಾರೆ. ಮನಮೋಹನ್ ಸಿಂಗ್ 3,656 ದಿನ, ಮೊರಾರ್ಜಿ ದೇಸಾಯಿ 2,511 ಹಾಗೂ ಅಟಲ್ ಬಿಹಾರಿ ವಾಜಪೇಯಿ 2,272 ದಿನಗಳ ಕಾಲ ಆಡಳಿತ ನಡೆಸಿದ್ದಾರೆ. ಈ ಮೂಲಕ ಹೆಚ್ಚು ದಿನ ಸರ್ಕಾರವನ್ನು ಮುನ್ನಡೆಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ.

ಹಲವು ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವರು ಸಹ ಈ ಕುರಿತು ಟ್ವೀಟ್ ಮಾಡುತ್ತಿದ್ದು, 20ನೇ ವರ್ಷದ ನಮೋ ಸಂಭ್ರಮವನ್ನು ಆಚರಿಸುತ್ತಿದ್ದಾರೆ. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೂ ಮುನ್ನ 2001ರಿಂದ 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಇದೀಗ ಅವರು ಪ್ರಧಾನಿಯಾಗಿ 7 ವರ್ಷಗಳನ್ನು ಪೂರೈಸಿದ್ದಾರೆ.

ಈ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಷ್ಟ್ರೀಯ ಪತ್ರಿಕೆಯಲ್ಲಿ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರದ ಮುಖ್ಯಸ್ಥರಾಗಿ ಚುನಾವಣೆಯಲ್ಲಿ ಸೋತಿಲ್ಲ ಎಂದು ಹೇಳಿದ್ದಾರೆ.

PM modi

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹ ಟ್ವೀಟ್ ಮಾಡಿ, ಕೃಷಿ ಸುಧಾರಣೆ, ಕೈಗಾರಿಕೆ ಬೆಳವಣಿಗೆ, ಹೆಣ್ಣು ಮಕ್ಕಳ ಶಿಕ್ಷಣದ ಪ್ರೋತ್ಸಾಹಕ್ಕಾಗಿ ಪ್ರಧಾನಿ ಮೋದಿ ನಿರಂತರವಾಗಿ ಶಕ್ತಿಯ ಪ್ರವಹಿಸಿದ್ದಾರೆ. ನರೇಂದ್ರ ಮೋದಿಯವರು ಹಲವು ದಿಕ್ಕುಗಳಲ್ಲಿ ಗುಜರಾತ್‍ನಲ್ಲಿ ಬದಲಾವಣೆ ತಂದರು. ಇದೀಗ ಅವರ ನಾಯಕತ್ವದಲ್ಲಿ ನಮ್ಮ ಭಾರತ, ನವ ಭಾರತವಾಗಿ ಬದಲಾಗುತ್ತಿದೆ ಎಂದು ಬರೆದು ಕೊಂಡಿದ್ದಾರೆ.

PM MODI

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಸಹ ಮಾತನಾಡಿದ್ದು, ಭಾರತದ ಏಳಿಗೆಗಾಗಿ ಪ್ರಧಾನಿ ನರೇಂದ್ರ ಮೋದಿ ದಣಿವರಿಯದೆ ಕೆಲಸ ಮಾಡಿದ್ದಾರೆ. ವಿರೋಧ ಪಕ್ಷಗಳ ವಾಗ್ದಾಳಿಗಳು ಅವರನ್ನು ತಡೆಯಲಿಲ್ಲ. ತಾಯಿ ಭಾರತ ಮಾತೆಗೆ ಸೇವೆ ಸಲ್ಲಿಸುವಲ್ಲಿ ಅವರ ದೃಢ ನಿರ್ಧಾರವನ್ನು ಟೀಕಿಸಲಾಗುವುದಿಲ್ಲ. 130 ಕೋಟಿ ಜನರೇ ಅವರ ಕುಟುಂಬ. ಭಾರತೀಯರು ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಸಂಕಲ್ಪ ಎಂದಿನಂತೆ ಪ್ರಬಲವಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *