ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ದೈಹಿಕವಾಗಿ ದೂರವಾಗಿ ನಾಳೆಗೆ ಒಂದು ತಿಂಗಳು ಆಗಲಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಕನಕಪುರದ ನೆಲಗುಳಿಯ ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟಿದ್ದಾರೆ.
ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ಹೃದಯಾಘಾತವಾಗಿ ಮೃತಪಟ್ಟಿದ್ದರು. ಸಹೋದರ ಧ್ರುವ ಸರ್ಜಾ ತಮ್ಮ ಆಸೆಯಂತೆ ಅಣ್ಣ ಚಿರಂಜೀವಿಯ ಅಂತ್ಯಕ್ರಿಯೆಯನ್ನು ಕನಕಪುರದಲ್ಲಿರುವ ನೆಲಗುಳಿಯ ಬೃಂದಾವನ ಫಾರ್ಮ್ ಹೌಸ್‍ನಲ್ಲಿ ನೆರವೇರಿಸಿದ್ದರು. ಚಿರಂಜೀವಿ ಸರ್ಜಾ ಅವರು ದೈಹಿಕವಾಗಿ ದೂರವಾಗಿ ಜುಲೈ 7ಕ್ಕೆ ಒಂದು ತಿಂಗಳು ಕಳೆಯಲಿದೆ.
ಇಂದೇ ಕುಟುಂಬ ಸದಸ್ಯರು ಫಾರ್ಮ್ ಹೌಸ್‍ಗೆ ಭೇಟಿ ಕೊಟ್ಟು ಚಿರಂಜೀವಿ ಸರ್ಜಾ ತಿಂಗಳ ಕಾರ್ಯ ಮಾಡಿದ್ದಾರೆ. ಚಿರು ಸಮಾಧಿ ಗೆ ಸೋದರ ಧ್ರುವ ಸರ್ಜಾ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಅರ್ಜುನ್ ಸರ್ಜಾ, ಮೇಘನಾ ರಾಜ್, ಚಿರು ಅಪ್ಪ, ಅಮ್ಮ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಚಿರಂಜೀವಿ ಸರ್ಜಾ ಅವರನ್ನು ನೆನೆದು ಕುಟುಂಬ ಸದಸ್ಯರು ಕಣ್ಣೀರಿಟ್ಟಿದ್ದಾರೆ.
ಇತ್ತೀಚೆಗಷ್ಟೆ ನಟ ಧ್ರುವ ಸರ್ಜಾ ಅವರಿಗೆ ಆರೋಗ್ಯ ಸಮಸ್ಯೆ ಆಗಿದೆ. ಲೋ ಬಿಪಿಯಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಈ ಎಲ್ಲಾ ಗಾಸಿಪ್ ಗಳಿಗೆ ಧ್ರುವ ಆಪ್ತ ವಲಯ ಉತ್ತರ ಕೊಟ್ಟಿತ್ತು.
ಧ್ರುವ ಸರ್ಜಾ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಆರಾಮಾಗಿದ್ದಾರೆ. ತಂದೆ, ತಾಯಿ ಕೂಡ ಆರಾಮಾಗಿದ್ದಾರೆ ಅಂತ ಧ್ರುವ ಆಪ್ತವಲಯ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿತ್ತು.