ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣಕ್ಕೆ ಇಡೀ ಚಿತ್ರರಂಗ ಹಾಗೂ ರಾಜ್ಯದ ಜನತೆ ಕಂಬನಿ ಮಿಡಿಯುತ್ತಿದ್ದಾರೆ. ಚಿರು ಪತ್ನಿ ಮೇಘನಾಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಂತ್ವನ ಹೇಳಿದ್ದಾರೆ.
ಚಿರು ಅಂತಿಮ ದರ್ಶನ ಪಡೆದ ಬಳಿಕ ಡಿಕೆಶಿ, ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪತ್ನಿ ಮೇಘನಾ, ಸಹೋದರ ಧೃವ ಸರ್ಜಾ ಹಾಗೂ ಮಾವ ಅರ್ಜುನ್ ಸರ್ಜಾ ಅವರಿಗೆ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ.
Paid my last respect to #ChiranjeeviSarja and condoled Arjun Sarja, Sundar Raj, wife Meghana Raj & brother Dhruva Sarja. Strength to the whole family members & film fraternity. My prayers and thoughts to his whole family members during this time of grief. pic.twitter.com/QnpkOixea8
— DK Shivakumar (@DKShivakumar) June 8, 2020
ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ನಟ ಚಿರಂಜೀವಿ ಅರ್ಜಾ ಅವರ ಅಂತಿಮ ದರ್ಶನವನ್ನು ಪಡೆದೆ. ಹಾಗೆಯೇ ಚಿರುವನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಆ ಭಗವಂತ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.
ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಮನುಷ್ಯನ ಹುಟ್ಟು ಆಕಸ್ಮಿಕವಾದದ್ದು, ಸಾವು ಅನಿವಾರ್ಯ. ಈ ಮರಣ ಎಂಬುದು ಯಾರ ಕೈಯಲ್ಲೂ ಇಲ್ಲ. ಯಮ ನಮಗೆ ಯಾವ ಕಾರಣಕ್ಕೂ ಕರುಣೆ ತೋರಿಸಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಆರೋಗ್ಯವಾಗಿರುವಂತಹ ಒಬ್ಬ ಯುವಕ ಇಂದು ನಮ್ಮೊಂದಿಗಿಲ್ಲ ಅನ್ನೋದು ದುಃಖದ ವಿಚಾರ. ಅನೇಕ ಸಂದರ್ಭಗಳಲ್ಲಿ, ಕಾರ್ಯಕ್ರಮಗಳಲ್ಲಿ ನಾನು ಸರ್ಜಾ ಕುಟುಂವ ಹಾಗೂ ಚಿರಂಜೀವಿಯನ್ನು ಭೇಟಿ ಮಾಡಿದ್ದೇನೆ. ಹೀಗಾಗಿ ಅವರ ಕುಟುಂಬವನ್ನು ಕೂಡ ನಾನು ಚೆನ್ನಾಗಿ ಬಲ್ಲೆ ಎಂದಿದ್ದರು.
ಭಗವಂತ ಕ್ರೂರವಾಗಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಕರೆದುಕೊಂಡಿರುವುದು ನಿಜವಾಗಿಯೂ ಯಾರಿಗೂ ನಂಬಲು ಅಸಾಧ್ಯವಾದದ್ದು. ಈ ಘಟನೆಯನ್ನು ತಡೆದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇಷ್ಟು ಆರೋಗ್ಯಕರವಾಗಿದ್ದಂತಹ ಒಬ್ಬ ಯುವಕನಿಗೆ ಹೃದಯಾಘಾತವಾಗಿದೆ ಎಂದರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಸಿನಿಮಾಲೋಕಕ್ಕೆ ಅಪಾರ ಸೇವೆ ಮಾಡಿದ ದೊಡ್ಡ ಕುಟುಂಬ ಸರ್ಜಾ ಅವರದ್ದಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಇನ್ನೊಬ್ಬ ನಟ ಆ ಕುಟುಂಬದಲ್ಲಿ ಹುಟ್ಟಿ ಬರಲಿ ಎಂದು ಡಿಕೆಶಿ ಸಂತಾಪ ಸೂಚಿಸಿದ್ದಾರೆ.