ಬೆಂಗಳೂರು: ದಿನೇ ದಿನೇ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದೇ ರೀತಿ ಸಾವಿನ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಪರಿಣಾಮ ಚಿತಾಗಾರದ ಮುಂದೆ ಸಾಲು ಸಾಲು ಅಂಬುನೆಲ್ಸ್ ಕ್ಯೂ ನಿಂತಿವೆ.
ಹೆಬ್ಬಾಳ ಚಿತಾಗಾರದ ಮುಂದೆ ಅಂಬುಲೆನ್ಸ್‌ಗಳು ಕ್ಯೂ ನಿಂತಿವೆ. ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿತಾಗಾರದ ಮುಂದೆ ಕ್ಯೂ ನಿಲ್ಲುವಂತಹ ಪರಿಸ್ಥಿತಿ ಬಂದಿದೆ. ಇದುವರೆಗೂ ಬೆಂಗಳೂರಿನಲ್ಲಿ ಕೊರೊನಾದಿಂದ 833 ಮಂದಿ ಸಾವನ್ನಪ್ಪಿದ್ದಾರೆ.
ಒಬ್ಬ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಸುಮಾರು ಒಂದು ಗಂಟೆ ಕಾಲ ಸಮಯಬೇಕು. ಹೀಗಾಗಿ ಒಂದು ಶವ ಸುಡುವುದಕ್ಕೆ ನಾಲ್ಕೈದು ಗಂಟೆ ಪಿಪಿಇ ಕಿಟ್ ಧರಿಸಬೇಕು ಎಂದು ಸಾರ್ವಜನಿಕರು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ. ಹೆಬ್ಬಾಳ ಚಿತಾಗಾರಾದೊಳಗೆ ಕೋವಿಡ್‍ನಿಂದ ಮೃತಪಟ್ಟಿರುವ ಶವದ ಜೊತೆ ಅಂಬುಲೆನ್ಸ್ ಸಾಲಾಗಿ ನಿಂತಿವೆ.
ಶುಕ್ರವಾರ 5,007 ಮಂದಿಗೆ ಸೋಂಕು ಬಂದಿದ್ದು, ಒಂದೇ ದಿನ 110 ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ನಿನ್ನೆ ಬೆಂಗಳೂರು 2,267 ಮಂದಿಗೆ ಸೋಂಕು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 85,870ಕ್ಕೆ ಏರಿಕೆಯಾಗಿದೆ. ಈ ಪೈಕಿ 52,791 ಸಕ್ರಿಯ ಪ್ರಕರಣಗಳಿದ್ದರೆ, 31,347 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1, 774 ಮಂದಿ ಮೃತಪಟ್ಟಿದ್ದು, 611 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.