– ಪಕ್ಕದೂರಿನಲ್ಲಿ 4 ಜನರಿಗೆ ಸೋಂಕು
ಚಿಕ್ಕಬಳ್ಳಾಪುರ: ಕಳೆದೊಂದು ತಿಂಗಳಿನಿಂದ ಇಳಿಮುಖವಾಗುತ್ತಿದ್ದ ಕೊರೊನಾ ಸೋಂಕಿನ ಸಂಖ್ಯೆ ಮತ್ತೆ ಏರಿಕೆಯಾಗ್ತಿದೆಯಾ? ಎರಡನೇ ಅಲೆ ರಾಜ್ಯದಲ್ಲಿ ಆರಂಭವಾಗ್ತಿದೆಯಾ ಅನ್ನೋ ಅನುಮಾನ ಕಾಡತೊಡಗಿದೆ. ಕಾರಣ ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ನಹಳ್ಳಿಯೊಂದರಲ್ಲಿ ಇಂದು ಒಂದೇ ದಿನ 14 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಇನ್ನು ಇದೇ ಗ್ರಾಮದ ಪಕ್ಕದೂರಿನಲ್ಲಿ 4 ಜನರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.
ಜಿಲ್ಲಾ ಕೇಂದ್ರದದ ಶಿಡ್ಲಘಟ್ಟ ಮಾರ್ಗದ ಈ ಹಳ್ಳಿಯೊಂದರಲ್ಲಿ ಮೂರು ದಿನಗಳ ಹಿಂದೆ 81 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಇಂದು 14 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಇವರಲ್ಲಿ ಮಹಿಳೆಯರು-ಯುವತಿಯರು, ಮಕ್ಕಳು ಅದರಲ್ಲೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹ ಇದ್ದಾರೆ. ಇನ್ನೂ ಇಷ್ಟು ದಿನ ಎರಡು-ಮೂರು-ನಾಲ್ಕು ಅಂತ ಒಂದಂಕಿ ಸಂಖ್ಯೆಯಲ್ಲಿ ಬರುತ್ತಿದ್ದ ಸೋಂಕಿತರ ಸಂಖ್ಯೆ ಇಂದು ಒಂದೇ ಗ್ರಾಮದಲ್ಲಿ 14 ಮಂದಿಗೆ ಪಾಸಿಟಿವ್ ಬಂದಿರೋದು ಆರೋಗ್ಯ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿದೆ.
ಸದ್ಯ ಎಚ್ಚೆತ್ತಿರೋ ಅಧಿಕಾರಿಗಳು ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲು ಮುಂದಾಗಿದ್ದಾರೆ. 14 ಮಂದಿಯಲ್ಲಿ ಇಬ್ಬರನ್ನ ಕೋವಿಡ್ ಕೇರ್ ಸೆಂಟರ್ ಗೆ ರವಾನೆ ಮಾಡಲಾಗಿದೆ. ಉಳಿದವರನ್ನ ಹೋಂ ಐಸೋಲೇಷನ್ ಮಾಡಲಾಗಿದೆ. ಸದ್ಯ ಇಡೀ ಗ್ರಾಮದಲ್ಲಿ ಕೋರೋನಾ ಆತಂಕ ಶುರುವಾಗಿದೆ.