– ಉಡುಪಿ ‘ಕೈ’ ಅಂಗಳದಲ್ಲಿ ಅಸಮಾಧಾನ
– ಕುಂದಾಪುರದ ಭಕ್ತರು ಹೇಳಿದ್ದ ಹರಕೆ ತೀರಿಸಿದ ಡಿಕೆಶಿ
– ರಾಜ್ಯಾಧ್ಯಕ್ಷರ ಕಾರ್ಯಕ್ರಮಕ್ಕೆ ಮಧ್ವರಾಜ್ ಗೈರು
ಉಡುಪಿ: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಮೊದಲ ಉಡುಪಿ ಪ್ರವಾಸ ಕೈಗೊಂಡಿದ್ದಾರೆ. ಸಮಾವೇಶದ ಜೊತೆ ಸಾಲು ಸಾಲು ದೇಗುಲಗಳ ದರ್ಶನ ಮಾಡಿದ್ದಾರೆ. ತಿಹಾರ್ ಜೈಲಿನಲ್ಲಿದ್ದಾಗ ಭಕ್ತರು ಹೇಳಿದ್ದ ಹರಕೆ ತೀರಿಸಿದ್ದಾರೆ. ಇದೇ ವೇಳೆ ಡಿ.ಕೆ.ಶಿವಕುಮಾರ್ ಎದುರೇ ಕಾಂಗ್ರೆಸ್ ಅಂಗಳದಲ್ಲಿನ ಅಸಮಾಧಾನ ಪ್ರದರ್ಶನವಾಯ್ತು. ವೇದಿಕೆಯ ಮೇಲೆ ಮಾತನಾಡುವಾಗ ಚಾಡಿ ಹೇಳೋದು ಬಿಡಿ, ನಾನಂತೂ ಕೇಳಲ್ಲ ಎಂದು ಎಲ್ಲ ನಾಯಕರಿಗೆ ಚಾಟಿ ಬೀಸಿದರು.
Advertisement
ಶನಿವಾರ ರಾತ್ರಿ ಉಡುಪಿಗೆ ಆಗಮಿಸಿದ ಡಿಕೆಶಿ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಇಂದು ಬೆಳಗ್ಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಕೊಲ್ಲೂರು ಮೂಕಾಂಬಿಕೆಗೆ ನಡೆಯುವ ಉತ್ಸವದಲ್ಲಿ ಡಿಕೆಶಿ ಭಾಗಿಯಾದರು. ದಾರಿ ನಡುವೆ ಮಾರಣಕಟ್ಟೆ ಬ್ರಹ್ಮ ಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
Advertisement
Advertisement
ಕುಂದಾಪುರ ಭಕ್ತರ ಹರಕೆ: ಐಟಿ ದಾಳಿ ನಂತರ ಡಿಕೆಶಿ ತಿಹಾರ್ ಜೈಲಿನಲ್ಲಿದ್ದ ವೇಳೆ ಪಕ್ಷದ ಕೆಲ ಕಾರ್ಯಕರ್ತರು ಹರಕೆ ಹೊತ್ತಿದ್ದರು. ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಕಮಲಶಿಲೆ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದರು. ಅಲ್ಲೇ ಭೋಜನ ಪ್ರಸಾದ ಸ್ವೀಕರಿಸಿದರು. ಈ ಬಗ್ಗೆ ಮಾತನಾಡಿದ ಡಿಕೆಶಿ ಸಂಕಷ್ಟದ ಕಾಲದಲ್ಲಿ ಸಾಕಷ್ಟು ಜನ ನನಗೆ ಬೆಂಬಲವಾಗಿ ನಿಂತಿದ್ದಾರೆ. ಪ್ರತಿಭಟನೆಗಳನ್ನು ನಡೆಸಿದ್ದಾರೆ. ದೇವರಿಗೆ ಹರಕೆ ಹೊತ್ತಿದ್ದಾರೆ ಅವರೆಲ್ಲರಿಗೂ ನಾನು ಚಿರಋಣಿ ಎಂದರು.
Advertisement
ಇಂದು ಬೆಳಗ್ಗೆ ಕೊಲ್ಲೂರು ಮುಕಾಂಬಿಕಾ ದರ್ಶನ ಕೈಗೊಂಡರು. ಯಾವುದೇ ಚಂಡಿಕಾ ಹೊಮ ನಡೆಸದ ಡಿಕೆ ಶಿವಕುಮಾರ್ ದೇವಾಲಯದ ರಥೋತ್ಸವದಲ್ಲಿ ಭಾಗಿಯಾದರು. ದೇವಾಲಯದ ವತಿಯಿಂದ ಗೌರವ ಪ್ರಸಾದ ಸ್ವೀಕರಿಸಿದರು.
ಪ್ರಮೋದ್ ಮಧ್ವರಾಜ್ ಗೈರು: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಉಡುಪಿ ಜಿಲ್ಲೆಗೆ ಅಧಿಕಾರ ವಹಿಸಿಕೊಂಡು ಮೊದಲ ಬಾರಿಗೆ ಭೇಟಿ ಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‍ನ ಭಿನ್ನಮತ ಮತ್ತೆ ಪ್ರದರ್ಶನಗೊಂಡಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಾಜ್ಯಾಧ್ಯಕ್ಷರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ರಾಜ್ಯಾಧ್ಯಕ್ಷರು ಜಿಲ್ಲೆಗೆ ಪ್ರಥಮ ಬಾರಿ ಆಗಮಿಸಿದ್ದರೂ ಪ್ರಮೋದ್ ಮಧ್ವರಾಜ್ ಶುಭಕೋರಿ ಒಂದೇ ಒಂದು ಕಟೌಟ್ ಜಿಲ್ಲೆಯಲ್ಲಿ ಕಾಣಿಸಲಿಲ್ಲ.
ಉಡುಪಿ ಬಣ ರಾಜಕೀಯ: ಸಮಾವೇಶ ನಡೆಯುವ ಸಭಾಂಗಣದ ಹೊರಗೆ ಪ್ರಮೋದ್ ಮಧ್ವರಾಜ್ ಬೆಂಬಲಿಗರು ಪೆಂಡಾಲ್ ಹಾಕಿ ಮೌನ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು. ಡಿಕೆಶಿ ಸಮಾವೇಶಕ್ಕೆ ಬಂದಿಳಿಯುತ್ತಿದ್ದಂತೆ ಉಡುಪಿಯ ಬಣ ರಾಜಕೀಯ ಜಗಜ್ಜಾಹೀರಾಯಿತು. ಸಭಾಂಗಣದ ಆವರಣದಲ್ಲಿ ವಿವಿಧ ಬಣದ ಮುಖಂಡರು, ಕಾರ್ಯಕರ್ತರು ಡಿಕೆಶಿ ಅವರ ಮುಂದೆ ಕಾಣಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಮಧ್ವರಾಜ್ ಬಣ, ಎನ್ ಎಸ್ ಯುಐ, ಸೇವಾದಳ, ಹೀಗೆ ಹಲವು ಗುಂಪುಗಳು ಡಿಕೆಶಿ ಅವರನ್ನು ಅಕ್ಷರಶಃ ಎಳೆದಾಡಿದರು.
ಮೌನ ಪ್ರತಿಭಟನೆ ನಡೆಸಲು ಪೆಂಡಾಲ್ ಹಾಕಲಾಗಿತ್ತು. ಈ ಪೆಂಡಾಲ್ ಗೆ ಡಿಕೆಶಿ ಪ್ರವೇಶಿಸಿದರು. ಸಣ್ಣ ಮಾತುಕತೆ ಮಾಡಿ ಪರಿಸ್ಥಿತಿ ತಿಳಿಗೊಳಿಸಿ ಸಮಾವೇಶ ಜಾಗಕ್ಕೆ ಕರೆದೊಯ್ದರು.
ಚಾಡಿ ಹೇಳೋದು ಬಿಡಿ: ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಿಕೆ ಶಿವಕುಮಾರ್, ನನ್ನಿಂದಲೇ ಪಕ್ಷ ಅಂತ ಅಂದುಕೊಂಡಿದ್ದರೆ ಬಿಟ್ಟು ಬಿಡಿ. ಬ್ಲ್ಯಾಕ್ ಮೇಲ್ ಮಾಡಬಹುದು ಅಂತ ಭಾವಿಸಿದ್ರೆ ಅದು ಭ್ರಮೆ. ಯಾರಾದ್ರೂ ಪಕ್ಷ ಬಿಟ್ಟು ಹೋಗುವವರಿದ್ರೆ ಗೌರವವಾಗಿ ಕಳಸಿಕೊಡೋಣ. ಯಾರೂ ಕೂಡಾ ಪರ್ಮನೆಂಟ್ ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರೋದು ಸೌಭಾಗ್ಯ. ಮೊದಲು ಶಿಸ್ತು ಬೇಕು, ಅಧಿಕಾರ ಎಲ್ಲರಿಗೂ ಸಿಗುತ್ತೆ ಜಿಲ್ಲೆಯಲ್ಲಿ ಒಬ್ರೂ ಶಾಸಕರಿಲ್ಲ ಕಾರ್ಯಕರ್ತರು ಏನ್ ಮಾಡ್ಬೇಕು? ಎಲ್ಲಿ ತ್ಯಾಗ, ಶ್ರಮ ಇಲ್ಲವೋ ಅಲ್ಲಿ ಫಲ ಇಲ್ಲ. ಹಿಂದೆ ಆಗಿದ್ದನ್ನೆಲ್ಲ ಮರೆತುಬಿಡಿ. ಚಾಡಿ ಹೇಳೋದು ಬಿಡಿ, ನಾನಂತೂ ಯಾವ ಚಾಡಿನೂ ಕೇಳಲ್ಲ ಅಂತ ಭಿನ್ನಮತ ಮಾಡುವ ಎಲ್ಲಾ ನಾಯಕರಿಗೆ ಡಿಕೆಶಿ ಚಾಟಿ ಬೀಸಿದರು.