– ದೇವಿಯ ಪವಾಡ ಅಂದ್ರು ಸ್ಥಳೀಯರು
ಭೋಪಾಲ್: ಸಾಮಾನ್ಯವಾಗಿ ಖದೀಮರು ಕಳ್ಳತನ ಮಾಡಲು ಹಾಗೂ ಕಳವುಗೈದ ವಸ್ತುವಿನೊಂದಿಗೆ ಹೇಗೆ ಜಾಗ ಖಾಲಿ ಮಾಡುವುದು ಎಂದು ಯೋಜನೆ ಹಾಕುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ತಾನು ಕದ್ದ ವಸ್ತುವಿನೊಂದಿಗೆ ಅದೇ ಜಾಗದಲ್ಲಿ ನಿದ್ದೆಗೆ ಜಾರಿ ಸಿಕ್ಕಿಬಿದ್ದ ಅಚ್ಚರಿಯ ಘಟನೆಯೊಂದು ನಡೆದಿದೆ.
ಹೌದು. ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಶಹಜಾಪುರದ ಲಾಲ್ಬಾಯ್-ಫುಲ್ಬಾಯ್ ಮಾತಾ ದೇವಸ್ಥಾನದಲ್ಲಿ ನಡೆದಿದೆ. ಕಳ್ಳ ಮೊದಲು ತ್ರಿಶೂಲದಿಂದ ದೇಗುಲದ ಬಾಗಿಲಿನ ಬೀಗವನ್ನು ಮುರಿದು ಆವರಣಕ್ಕೆ ಪ್ರವೇಶಿಸಿದನು. ಹೀಗೆ ಹೋದವನು ದೇಗುಲದಿಂದ ಕಳ್ಳತನ ಮಾಡಿದ್ದಾನೆ. ನಂತರ ಹೇಗಾದರೂ ಮಾಡಿ ಹೊರಬಂದು ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತಾ ಅಲ್ಲೇ ಇದ್ದ ಹಾಸಿಗೆಯ ಮೇಲೆ ಕುಳಿತಿದ್ದಾನೆ. ಹೀಗೆ ಯೋಚಿಸುತ್ತಾ ಕುಳಿತಿದ್ದ ಕಳ್ಳ ಬೆಚ್ಚಗೆ ಅಲ್ಲೇ ನಿದ್ದೆಗೆ ಜಾರಿದ್ದಾನೆ.
ಸ್ವಲ್ಪ ಸಮಯದ ನಂತರ ದೇವಾಲಯದ ಉಸ್ತುವಾರಿ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಕಳ್ಳ ಮಲಗಿದ್ದನ್ನು ನೋಡಿದ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದಾಗ ಕಳ್ಳ ಇನ್ನೂ ನಿದ್ದೆಯ ಮಂಪರಿನಲ್ಲಿದ್ದನು. ಪೊಲೀಸರು ಕಳ್ಳನನ್ನು ಎಬ್ಬಿಸಲು ಪ್ರಯತ್ನ ಮಾಡಿದರು. ಆಗ ಕಳ್ಳ ‘ತುಂಬಾ ಚಳಿ ಇದೆ. ಸ್ವಲ್ಪ ಹೊತ್ತು ಮಲಗುತ್ತೇನೆ’ ಎಂದು ಹೇಳುತ್ತಾ ಮತ್ತೆ ನಿದ್ದೆಗೆ ಜಾರಿದ್ದಾನೆ. ಕೊನೆಗೆ ಹೇಗೋ ಎಬ್ಬಿಸಿ ಪೊಲೀಸರು ನೇರವಾಗಿ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಘಟನೆಯಿಂದ ಯುವಕ ದಿಗ್ಭ್ರಮೆಗೊಂಡಿದ್ದರಿಂದ ಆತನ ಹೆಸರು ಹಾಗೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಮಧ್ಯೆ ಸ್ಥಳೀಯರು ಇದೊಂದು ಪವಾಡ ಎಂದು ಬಣ್ಣಿಸಿದ್ದಾರೆ. ದೇಗುಲದಿಂದ ಕದ್ದ ಸ್ತುಗಳನ್ನು ತೆಗೆದುಕೊಂಡು ಹೋಗಲು ದೇವಿ ಬಿಡಲಿಲ್ಲ. ಹೀಗಾಗಿ ನಿದ್ದೆ ಮಾಡಿಸುವ ಮೂಲಕ ಆತನ ಕರಾಮತ್ತನ್ನು ಬಯಲು ಮಾಡಿದ್ದಾರೆ ಎಂದು ಹೇಳುತ್ತಾ ಹಳೆಯ ಕಥೆಗಳನ್ನು ಹಂಚಿಕೊಂಡರು.