– ಕಾರಿನಲ್ಲಿ ಬಂದಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು
– ಚನ್ನರಾಯಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್
ಹಾಸನ: ಗ್ರೀನ್ ಝೋನ್‍ನಲ್ಲಿದ್ದ ಹಾಸನ ಜಿಲ್ಲೆಗೆ ಮಹಾಮಾರಿ ಕೊರೊನಾ ಕಾಲಿಟ್ಟಿದೆ. ಮುಂಬೈಯಿಂದ ಹಾಸನಕ್ಕೆ ಆಗಮಿಸಿದ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ದೃಢ ಪಟ್ಟಿದೆ.
ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಐವರಲ್ಲಿ ಕೊರೊನಾ ದೃಢಪಟ್ಟಿದೆ. ಚನ್ನರಾಯಪಟ್ಟಣ ತಾಲೂಕಿನ ಐವರು ಮೇ 10ರಂದು ಮುಂಬೈನಿಂದ ಬಂದಿದ್ದರು. ಅದರಲ್ಲಿ ಒಂದೇ ಕುಟುಂಬದ ನಾಲ್ವರು ಒಂದೇ ಕಾರಿನಲ್ಲಿ ಬಂದಿದ್ದರು. ಒಂದೇ ಫ್ಯಾಮಿಲಿಯ ಇಬ್ಬರು ಮಕ್ಕಳು, ಓರ್ವ ಮಹಿಳೆ, ಓರ್ವ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಕಾರ್ ಚಾಲಕನ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
Advertisement
Advertisement
ಇನ್ನೊಂದು ಆತಂಕ ಅಂದ್ರೆ ಮೇ 10ರಂದು ಸುಮಾರು ಆರು ಜನ ಸ್ನೇಹಿತರು ಮತ್ತೊಂದು ಕಾರಿನಲ್ಲಿ ಮುಂಬೈನಿಂದ ಬಂದಿದ್ದಾರೆ. ಅದರಲ್ಲಿ ಇಬ್ಬರು ಚನ್ನರಾಯಪಟ್ಟಣದಲ್ಲಿ ಇಳಿದಿದ್ದಾರೆ. ಉಳಿದವರು ಕೆಆರ್ ಪೇಟೆಗೆ ಹೋಗಿದ್ದಾರೆ ಎನ್ನುವ ಮಾಹಿತಿ ಇದೆ. ಚನ್ನರಾಯಪಟ್ಟಣದಲ್ಲಿ ಇಳಿದ ಇಬ್ಬರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮತ್ತೊಬ್ಬರನ್ನೂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಚನ್ನರಾಯಪಟ್ಟಣಕ್ಕೆ ಬರುವ ಮುನ್ನ ಅವರನ್ನು ಅರಸೀಕೆರೆ ಚೆಕ್‍ಪೋಸ್ಟ್‌ನಲ್ಲಿ ಪರಿಶೀಲಿಸಿ, ಕ್ವಾರಂಟೈನ್ ಮಾಡಲಾಗಿದೆ.
Advertisement
ಸದ್ಯಕ್ಕೆ ಮುಂಬೈಯಿಂದ ಬಂದಿರುವ ಎಲ್ಲರ ಗಂಟಲು ದ್ರವ ಸ್ಯಾಂಪಲ್‍ಗೆ ಸೂಚಿಸಲಾಗಿದೆ. ಸೋಂಕಿತರನ್ನ ಚೆಕ್‍ಪೋಸ್ಟ್‌ನಲ್ಲಿ ಪರಿಶೀಲನೆ ಮಾಡಿದ್ದ ಪೊಲೀಸರು ಹಾಗೂ ಕ್ವಾರಂಟೈನ್‍ನಲ್ಲಿ ಇದ್ದವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಚನ್ನರಾಯಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಲಾಗಿದೆ.