ಮಡಿಕೇರಿ: ಗ್ರಾಮದ ಜನರಿಗೆ ಲಸಿಕೆ ಕೊಡಿಸುವ ಮೂಲಕ ಯುವಕ ಮಂಡಲದವರು ಮಾದರಿಯಾಗಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅರ್ವತೋಕ್ಲು ಗ್ರಾಮದ ಬೇಕೋಟ್ ಮಕ್ಕ ಯುವಕ ಮಂಡಲ ಕ್ಲಬ್ ನ ಕಾರ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಕೋವಿಶೀಲ್ಡ್ ಲಸಿಕಾ ಅಭಿಯಾನ ನಡೆಸಲಾಯಿತು.
ಕಾರ್ಯಕ್ರಮವನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿ, ಕೋವಿಡ್ ಹರಡುವಿಕೆಯ ನಿಯಂತ್ರಣ ನಮ್ಮಿಂದಲೇ ಸಾಧ್ಯ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಂಡು, ಲಸಿಕೆ ಹಾಕಿಸಿಕೊಂಡಲ್ಲಿ ವೈರಸ್ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಅತಿಹೆಚ್ಚು ಪಾಸಿಟಿವ್ ಪ್ರಕರಣವನ್ನು ಹೊಂದಿದ್ದ ಬೆಟ್ಟಗೇರಿ ಪಂಚಾಯಿತಿ ಎಚ್ಚೆತ್ತುಕೊಂಡು ಈಗ ಶೂನ್ಯ ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವುದು ಸಂತಸದ ವಿಚಾರ ಎಂದರು.
ಮಡಿಕೇರಿ ತಾಲೂಕು ಅರ್ವತೋಕ್ಲು ಗ್ರಾಮದ ಬೇಕೋಟ್ ಮಕ್ಕ ಯುವಕ ಮಂಡಲದ ಮೂಲಕ ಇಂದು 400ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಈ ಮೂಲಕ ಯುವಕರು ಮಾದರಿಯಾಗಿದ್ದಾರೆ. ಕ್ಲಬ್ ಮುಕಾಂತರ ಈ ಸಮಾಜಮುಖಿ ಕಾರ್ಯ ನಡೆಸುತ್ತಿರುವುದು ಆತ್ಯುತ್ತಮ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾದ ತಳೂರು ದಿನೇಶ್ ಕರುಂಬಯ್ಯ, ಕ್ಲಬ್ ಅಧ್ಯಕ್ಷರಾದ ಸೂರಿ ಕಾಕೇರಿ, ಕ್ಲಬ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.