ಗದಗ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ ಹೇಳಿ ಗ್ರಾನೈಟ್ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಗದಗದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಇಳಕಲ್ ಪಟ್ಟಣದ ಪ್ರಕಾಶ್ ಮಲ್ಲನಗೌಡ ಪಾಟೀಲ್ ವಂಚನೆಗೊಳಗಾದ ಉದ್ಯಮಿ. ದಾವಣಗೆರೆ ಮೂಲದ ವಿನಯ್ ಯಲಿಗಾರ ಮತ್ತು ಶಂಕರ್ ಯಲಿಗಾರ ಎಂಬವರು ಉದ್ಯಮಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.
ಎಲಿಗಾರ ಸಹೋದರರು ತಮ್ಮ ವಿ.ವೈ ಕ್ಯಾಪಿಟಲ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ತಾವು ಕಟ್ಟಿದ ಹಣಕ್ಕೆ ನಾಲ್ಕು ತಿಂಗಳಿಗೊಮ್ಮೆ ಶೇ.30 ರಷ್ಟು ಹಣ ಲಾಭ ಪಡೆಯಬಹುದು ಎಂದು ಉದ್ಯಮಿಗೆ ಇಲ್ಲ-ಸಲ್ಲದ ಮಾಹಿತಿ ನೀಡಿ ನಂಬಿಸಿ ಬಲೆಗೆ ಹಾಕಿಕೊಂಡಿದ್ದಾರೆ.
ಬಣ್ಣದ ಮಾತುಗಳನ್ನು ನಂಬಿದ ಉದ್ಯಮಿ ಪ್ರಕಾಶ್ ಪಾಟೀಲ್, ಕಳೆದ 2020 ಜೂನ್ 28 ರಂದು ಗದಗನ ಪಂಚಾಕ್ಷರಿ ನಗರದಲ್ಲಿ ಇರುವ ಉದ್ಯಮಿಯ ಸಹೋದರ ನಾಗರಾಜ್ ಪಾಟೀಲ್ ಮನೆಯಲ್ಲಿ ವ್ಯವಹಾರ ಕುದುರಿಸಿದ್ದಾರೆ. ಈ ವೇಳೆ 35 ಲಕ್ಷ ರೂಪಾಯಿ ಹಣವನ್ನು ಆರೋಪಿತರ ಕೈಗೆ ಕೊಟ್ಟಿದ್ದಾರೆ. ಹಣ ಪಡೆದು ಕಳೆದ ಏಳೆಂಟು ತಿಂಗಳಿಂದ ಒಂದು ನಯಾ ಪೈಸೆನೂ ಸಹ ಉದ್ಯಮಿಗೆ ಕೊಡದೆ ವಂಚಿಸಿದ್ದಾರೆ.
ಸದ್ಯ ಉದ್ಯಮಿ ಪ್ರಕಾಶ್ ಗದಗ ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗದಗ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಇದೇ ರೀತಿ ಹಲವರಿಗೆ ವಂಚನೆ ಮಾಡಿರುವ ಮಾಹಿತಿ ಮೇರೆಗೆ ಆ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.