ಚಿಕ್ಕಬಳ್ಳಾಪುರ : ಗೌರಿ ಗಣೇಶ ಹಬ್ಬಕ್ಕೆ ತವರು ಮನೆಗೆ ಗಂಡ ಕಳುಹಿಸದಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಪ್ರಭಾಕರ ಬಡಾವಣೆಯಲ್ಲಿ ನಡೆದಿದೆ.
38 ವರ್ಷದ ನಿಂಗಮ್ಮ ಮೃತ ಗೃಹಿಣಿ. ಬಾಗಲಕೋಟೆ ಮೂಲದ ಸಂಗಮೇಶ್ ಕೆಎಸ್‍ಆರ್ ಟಿಸಿ ಡ್ರೈವರ್ ಕಂ ಕಂಡಕ್ಟರ್ ಆಗಿ ಚಿಂತಾಮಣಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಗರದ ಪ್ರಭಾಕರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗೌರಿ ಗಣೇಶ ಹಬ್ಬಕ್ಕೆ ತಾನು ತವರು ಮನೆ ಬಾಗಲಕೋಟೆಗೆ ಹೋಗೋದಾಗಿ ಗಂಡನ ಬಳಿ ಕೇಳಿದ್ದಾರೆ. ಗಂಡ ತವರು ಮೆನೆಗೆ ಹೋಗೋದು ಬೇಡ ಅಂತ ಹೇಳಿದ್ದು, ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಸಂಬಂಧ ನೊಂದ ಪತ್ನಿ ನಿಂಗಮ್ಮ ಸೋಮವಾರ ತಡರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಚಿಂತಾಮಣಿ ನಗರ ಠಾಣೆಯಲ್ಲಿ ಮೃತಳ ಪೋಷಕರು ಸಂಗಮೇಶ್ ವಿರುದ್ಧ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನಿಡಿದ ಆರೋಪದಡಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸಂಗಮೇಶ್‍ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಂಪತಿಗೆ ಮೂವರು ಮಕ್ಕಳಿದ್ದು, ತಾಯಿ ಆತ್ಮಹತ್ಯೆಯಿಂದ ಮಕ್ಕಳು ತಬ್ಬಲಿಗಳಾಗುವಂತಾಗಿದೆ. ಇನ್ನೂ ತವರು ಮನೆಗೆ ಕರೆ ಮಾಡಿದ್ದ ಮೃತ ನಿಂಗಮ್ಮ, ನನಗೆ ಗಂಡ ಸಂಗಮೇಶ್ ಹೊಡೆಯೋದು ಬಡಿಯೋದು ಮಾಡ್ತಿದ್ದು, ಸಾಕಷ್ಟು ಕಿರುಕುಳ ಕೊಡ್ತಿದ್ದಾನೆ ಅಂತ ಹೇಳಿದ್ದಳು ಅಂತ ಮೃತಳ ಅಕ್ಕ ತಿಳಿಸಿದ್ದಾರೆ.