ಮಡಿಕೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಗೋವು ಮತ್ತು ಹಿಂದುತ್ವದ ಬಗ್ಗೆ ತೀರಾ ಹಗುರವಾಗಿ ಮಾತನಾಡುತ್ತಾರೆ. ಹೀಗಾಗಿ ಗೋಶಾಪದಿಂದಲೇ ಅವರು ಸಿಎಂ ಸ್ಥಾನವನ್ನು ಕಳೆದುಕೊಂಡರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಸೇವಕ್ ಸಮಾವೇಶಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಈಶ್ವರಪ್ಪ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡಿರುವ ಕುರಿತಾಗಿ ಮಾತನಾಡಿದ್ದಾರೆ. ಅವರು ಗೋಶಾಪದಿಂದಲೇ ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತರು. ಆಕಸ್ಮಿಕವಾಗಿ ಬಾದಾಮಿ ಕ್ಷೇತ್ರದಿಂದ ಸಣ್ಣ ಅಂತರದಿಂದ ಗೆದ್ದರು. ಇದೇ ರೀತಿ ಗೋವು ಮತ್ತು ಹಿಂದುತ್ವದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರೆ ಮುಂದೆ ರಾಜ್ಯದಲ್ಲಿ ಎಲ್ಲಿಯೂ ಕಾಂಗ್ರೆಸ್ ಪಕ್ಷವಾಗಲಿ ಅಥವಾ ಸಿದ್ದರಾಮಯ್ಯವಾಗಲಿ ಗೆಲ್ಲೋದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಿರುತ್ತಾರೆ. ಆದರೆ ರಾಜ್ಯದ ಜನತೆ, ಹೈಕಮಾಂಡ್ ಮತ್ತು ಯಡಿಯೂರಪ್ಪ ಅವರು ಕುಳಿತು ಈ ವಿಚಾರವಾಗಿ ನಿರ್ಧಾರ ಮಾಡುತ್ತಾರೆ ಹೊರತು ಸಿದ್ದರಾಮಯ್ಯ ಅಲ್ಲ ಎಂದು ಹೇಳುವ ಮೂಲಕವಾಗಿ ತಿರುಗೇಟು ನೀಡಿದ್ದಾರೆ.
ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಕೂಡ ಸಿಎಂ ಬದಲಾಗುತ್ತಾರೆ ಎನ್ನೋ ಹೇಳಿಕೆ ನೀಡಿದ್ದಾರೆ. ಯತ್ನಾಳ್ ಅವರ ಹೆಸರನ್ನು ಕೇಂದ್ರ ಶಿಸ್ತು ಸಮಿತಿಗೆ ಕಳುಹಿಸಲಾಗಿದೆ. ಅಷ್ಟಕ್ಕೂ ಅವರ ಮಾತಿಗೆಲ್ಲ ಬೆಲೆ ಕೊಡಬೇಕಾದ ಅಗತ್ಯವಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.