– ಸಂಘಟಕರ ವಿರುದ್ಧ ಪೋಷಕರು ಗಂಭೀರ ಆರೋಪ
ಹೈದರಾಬಾದ್: ವಿದ್ಯಾರ್ಥಿನಿಯೊಬ್ಬಳ ಕೂದಲು ಗೋ-ಕಾರ್ಟ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ಮೀರ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರ್ರಾಮ್ ಗುಡಾದಲ್ಲಿರುವ ಗೋ-ಕಾರ್ಟಿಂಗ್ ಪ್ಲೇ ಝೋನ್ ನಲ್ಲಿ ಈ ಅವಘಡ ಸಂಭವಿಸಿದೆ.
Advertisement
ಮೃತ ದುರ್ದೈವಿಯನ್ನು ವರ್ಷಿಣಿ ಎಂದು ಗುರುತಿಸಲಾಗಿದ್ದು, ಈಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಗುರುವಾರ ಸಂಜೆ ಗುರ್ರಾಮ್ ಗುಡಾದ ಗೋ-ಕಾರ್ಟಿಂಗ್ ಪ್ಲೇ ಝೋನ್ ಗೆ ತೆರಳಿದ್ದಳು. ಅಲ್ಲದೆ ಗೋ-ಕಾರ್ಟಿಂಗ್ ಮಾಡುತ್ತಿದ್ದ ವೇಳೆ ಅದರ ಚಕ್ರಕ್ಕೆ ವರ್ಷಿಣಿ ಕೂದಲು ಸಿಲುಕಿಕೊಂಡು ತಲೆಗೆ ಗಂಭೀರ ಗಾಯಗಳಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ವರ್ಷಿಣಿ ಕೂದಲು ಚಕ್ರಕ್ಕೆ ಸಿಲುಕಿಕೊಂಡ ಕೂಡಲೇ ಗೋ-ಕಾರ್ಟ್ ಅಪಘಾತಕ್ಕೀಡಾಗಿದೆ. ಪರಿಣಾಮ ಆಕೆ ಧರಿಸಿದ್ದ ಹೆಲ್ಮೆಟ್ ಕೂಡ ಪುಡಿಯಾಗಿದೆ. ಘಟನೆ ನಡೆದ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
Advertisement
ಇತ್ತ ಘಟನೆಯಿಂದ ಮಗಳನ್ನು ಕಳೆದುಕೊಳ್ಳುತ್ತಿದ್ದಂತೆಯೇ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಗೋ-ಕಾರ್ಟ್ ಪ್ಲೇ ಝೋನ್ ಸಂಘಟಕರ ನಿರ್ಲಕ್ಷ್ಯವೇ ನಮ್ಮ ಮಗಳ ಸಾವಿಗೆ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಹೈದರಾಬಾದ್ ನ ಮೀರ್ ಪೇಟೆ ಪೊಲೀಸ್ ಠಾಣೆಯಲ್ಲಿ ಸಂಘಟಕರ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ.
ಈ ಹಿಂದೆ ಅಂದರೆ 2018ರಲ್ಲಿ ಹರಿಯಾಣದಲ್ಲಿ ಕೂಡ ಇಂತದ್ದೇ ಘಟನೆ ನಡೆದಿತ್ತು. 29 ವರ್ಷದ ಪುನೀತ್ ಕೌರ್ ಎಂಬ ಮಹಿಳೆಯ ಕೂದಲು ಗೋ-ಕಾರ್ಟ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದರು. ಇದನ್ನೂ ಓದಿ: ಗೋ-ಕಾರ್ಟ್ ಚಕ್ರಕ್ಕೆ ಕೂದಲು ಸಿಲುಕಿ 28ರ ಮಹಿಳೆ ದುರ್ಮರಣ