– 30 ಜನರ ಪೈಕಿ 8 ಜನರನ್ನು ನಿಶ್ಚಿತಾರ್ಥಕ್ಕೆ ಕಳುಹಿಸಿದ ಪೊಲೀಸರು
ಕಾರವಾರ: ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸಿದೆ. ಕರ್ನಾಟಕ-ಗೋವಾ ಗಡಿಯಲ್ಲಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ, ಇಲ್ಲವೇ ವ್ಯಾಕ್ಸಿನ್ ಸರ್ಟಿಫಿಕೇಟ್ ಇರದ ಹೊರರಾಜ್ಯದ ಜನರನ್ನು ಮರಳಿ ಕಳುಹಿಸಲಾಗುತ್ತಿದೆ. ಆದರೆ ಅಪರೂಪದ ಪ್ರಕರಣ ಎಂಬಂತೆ ಗೋವಾದಿಂದ ರಾಜ್ಯಕ್ಕೆ ನಿಶ್ಚಿತಾರ್ಥಕ್ಕೆಂದು ಆಗಮಿಸುತ್ತಿದ್ದ ವರನನ್ನು ಮಾನವೀಯತೆ ದೃಷ್ಟಿಯಿಂದ ಬಿಟ್ಟು ಕಳುಹಿಸಿದ್ದಾರೆ.
Advertisement
ಇಂದು ಗೋವಾದ ಯುವಕ ಇಸ್ಮಾಯಿಲ್ ಹಾಗೂ ಕಾರವಾರದ ಯುವತಿಯ ಜೊತೆ ವಿವಾಹ ನಿಶ್ಚಿತಾರ್ಥ ಇತ್ತು. ವರನ ಕುಟುಂಬವು ಗೋವಾದಿಂದ ತಮ್ಮ ಸಂಬಂಧಿಕರೊಂದಿಗೆ ಕರ್ನಾಟಕದ ಗಡಿಗೆ ಆಗಮಿಸಿದ್ದಾರೆ. ಬೆಳಗ್ಗೆ ನಿಶ್ಚಿತಾರ್ಥದ ಮುಹೂರ್ತವಿದ್ದು, ಈ ವೇಳೆಗೆ ಯುವತಿಯ ಮನೆಯಲ್ಲಿ ಹುಡುಗನೊಂದಿಗೆ ಕುಟುಂಬ ಇರಬೇಕಿತ್ತು. ಆದರೆ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ. ಗೋವಾ ದಿಂದ ಕಾರವಾರಕ್ಕೆ ಹೊರಟಿದ್ದ ಈ ಕುಟುಂಬದ ಯಾರಲ್ಲಿಯೂ ಕೋವಿಡ್ ನೆಗೆಟಿವ್ ವರದಿ ಇರಲಿಲ್ಲ. ಹೀಗಾಗಿ ಚಿತ್ತಾಕುಲ ಪೊಲೀಸರು ಹಾಗೂ ಮಾಜಾಳಿಯಲ್ಲಿ ನಿಯೋಜನೆಗೊಂಡಿದ್ದ ಕಂದಾಯ ಅಧಿಕಾರಿಗಳು ಕಾರವಾರದ ಪ್ರವೇಶಕ್ಕೆ ತಡೆಹಿಡಿದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,785 ಕೊರೊನಾ ಕೇಸ್, 25 ಸಾವು
Advertisement
Advertisement
ಕುಟುಂಬ ಎರಡು ಗಂಟೆಗಳ ಕಾಲ ವಾಹನದಲ್ಲಿಯೇ ಕಾದು ಮುಹೂರ್ತ ಮೀರುವ ಕಾರಣ ಕರ್ನಾಟಕ ಭಾಗದ ಪೊಲೀಸರಲ್ಲಿ ವಿನಂತಿಸಿಕೊಂಡಿದ್ದಾರೆ. ಬಸ್ ನಲ್ಲಿ ಮೂವತ್ತಕ್ಕಿಂತ ಹೆಚ್ಚು ಜನರಿದ್ದರಿಂದ ಮಾನವೀಯತೆ ದೃಷ್ಟಿಯಿಂದ ವರನ ಕುಟುಂಬಕ್ಕೆ ಎಂಟು ಜನರಿಗೆ ಮಾತ್ರ ತೆರಳಲು ಅವಕಾಶ ನೀಡಿದ್ದಾರೆ. ಅವರಿಗೆ ಕೋವಿಡ್ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿಸಿ, ಕಳುಹಿಸಿದ್ದಾರೆ. ಈ ಮೂಲಕ ನಿಶ್ಚಿತಾರ್ಥಕ್ಕೆ ನೆರವೇರಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಳಿಕ ಇವರೊಂದಿಗೆ ನಿಶ್ಚಿತಾರ್ಥಕ್ಕೆ ಬಂದ ಉಳಿದವರನ್ನು ಮರಳಿ ಗೋವಾಕ್ಕೆ ಕಳುಹಿಸಲಾಗಿದೆ.