ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಗೂಗಲ್ ತನ್ನೆಲ್ಲ ಉದ್ಯೋಗಿಗಳಿಗೆ ಮುಂದಿನ ವರ್ಷ ಜೂನ್ ಅಂತ್ಯದ ವರೆಗೆ ಮನೆಯಿಂದಲೇ ಕೆಲಸ ಮಾಡಬಹುದು ಎಂದು ತಿಳಿಸಿದೆ.
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಭಾರತ ಸೇರಿ ವಿಶ್ವಾದ್ಯಂತ ಗೂಗಲ್ ಹಾಗೂ ಅಲ್ಫಾಬೆಟ್ ಸಂಸ್ಥೆಯ 2 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಇದು ಅನುಕೂಲವಾಗಲಿದ್ದು, 5 ಸಾವಿರಕ್ಕೂ ಕಡಿಮೆ ಉದ್ಯೋಗಿಗಳಿರುವ ಕಚೇರಿಗಳಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಿದೆ.
Advertisement
Advertisement
ಈ ಕುರಿತು ಗೂಗಲ್ ಹಾಗೂ ಅಲ್ಫಾಬೆಟ್ ಸಿಇಒ ಸುಂದರ್ ಪಿಚೈ ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದ್ದು, ಮುಂದಿನ ಯೋಜನೆಗಳಿಗೆ ಉದ್ಯೋಗಿಗಳು ಶಕ್ತಿಯನ್ನು ನೀಡಬೇಕು, ನಾವು ವರ್ಕ್ ಫ್ರಮ್ ಹೋಮ್ ಅವಕಾಶವನ್ನು ಜೂನ್ 30, 2021ರ ವರೆಗೆ ಮುಂದುವರೆಸಿದ್ದೇವೆ. ಕಚೇರಿಗೆ ಬರಬೇಕೆಂದೇನಿಲ್ಲ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
Advertisement
ಗೂಗಲ್ ಬೆಂಗಳೂರು, ಗುರುಗ್ರಾಮ, ಮುಂಬೈ ಹಾಗೂ ಹೈದರಾಬಾದ್‍ಗಳಲ್ಲಿ ತನ್ನ ಕಚೇರಿ ಹೊಂದಿದೆ. ಅಲ್ಲದೆ ಇತ್ತೀಚೆಗೆ ಗೂಗಲ್ 10 ಬಿಲಿಯನ್ ಡಾಲರ್‍ನಷ್ಟು ಹಣವನ್ನು ಡಿಜಿಟಲೈಸೇಶನ್ ನಿಧಿ ಎಂದು ಮೀಸಲಿರಿಸಿದ್ದು, ಮುಂದಿನ 5ರಿಂದ 7 ವರ್ಷಗಳಲ್ಲಿ ಕಂಪನಿಗಳು ಈ ನಿಧಿಯಡಿ ಹೂಡಿಕೆ ಮಾಡಬಹುದಾಗಿದೆ. ಅಕ್ವಿಟಿ ಇನ್ವೆಸ್ಟ್‍ಮೆಂಟ್, ಪಾಲುದಾರಿಕೆ, ಮೂಲಸೌಕರ್ಯ, ಪರಿಸರ ವ್ಯವಸ್ಥೆಗೆ ಸಂಬಂಧಿಸಿದಂತೆ ಹೂಡಿಕೆ ಮಾಡಬಹುದಾಗಿದೆ.
Advertisement
ಕಚೇರಿಗಳನ್ನು ತೆರೆಯಲು ಗೂಗಲ್ ಹಂತ ಹಂತವಾಗಿ ಯೋಚಿಸುತ್ತಿದ್ದು, ಜುಲೈ ವೇಳೆಗೆ ಶೇ.10ರಷ್ಟು ಕಟ್ಟಡವನ್ನು ಪಡೆಯುತ್ತೇವೆ. ಸೆಪ್ಟೆಂಬರ್ ವೇಳೆಗೆ ಶೇ.30ರಷ್ಟು ಕಟ್ಟಡಗಳನ್ನು ಪಡೆಯುತ್ತೇವೆ. 2021ರ ಆರಂಭಕ್ಕೆ ಉದ್ಯೋಗಿಗಳು ಮರಳಿ ಕೆಲಸಕ್ಕೆ ಬರಬಹುದಾಗಿದೆ ಎಂದು ಈ ಹಿಂದೆ ಸುಂದರ್ ಪಿಚೈ ತಮ್ಮ ಬ್ಲಾಗ್‍ನಲ್ಲಿ ತಿಳಿಸಿದ್ದರು. ಆದರೆ ಇದೀಗ ಇನ್ನೂ ಆರು ತಿಂಗಳು ಮನೆಯಿಂದ ಕೆಲಸ ಮಾಡಬಹುದು ಎಂದು ತಿಳಿಸಿದ್ದಾರೆ.
ಈ ವರ್ಷಾಂತ್ಯದ ವರೆಗೆ ಕೆಲಸಕ್ಕೆ ಕಚೇರಿಗೆ ಮರಳುವುದು ಉದ್ಯೋಗಿಗಳ ವಿವೇಚೆನೆಗೆ ಬಿಟ್ಟಿದ್ದು ಎಂದು ಈ ಹಿಂದೆ ಗೂಗಲ್ ತಿಳಿಸಿತ್ತು. ಆದರೆ ಈ ಅವಧಿಯನ್ನು ಇದೀಗ ಇನ್ನೂ 6 ತಿಂಗಳುಗಳ ಕಾಲ ಹೆಚ್ಚಿಸಿದೆ. ಮುಂದಿನ ವರ್ಷ ಜೂನ್ ಅಂತ್ಯದ ವರೆಗೆ ಕಚೇರಿಗೆ ಬರುವುದು ಉದ್ಯೋಗಿಗಳ ವಿವೇಚನೆಗೆ ಬಿಟ್ಟದ್ದು ಎಂದು ಗೂಗಲ್ ತಿಳಿಸಿದೆ. ವಿವಿಧ ದೇಶಗಳಲ್ಲಿ ಕೊರೊನಾ ಮಹಾಮಾರಿ ವ್ಯಾಪಿಸುತ್ತಿರುವುದರಿಂದ ಗೂಗಲ್ ಈ ನಿರ್ಧಾರ ಕೈಗೊಂಡಿದೆ.