ಗುಣ ಲಕ್ಷಣಗಳೇ ಇಲ್ಲದಿರೋ ಸೋಂಕಿತರಿಂದ ಕೊರೊನಾಘಾತ!

Public TV
2 Min Read
KLR CORONA

ಕೋಲಾರ: ವಿಶ್ವದಾದ್ಯಂತ ಕೊರೊನಾ ಮಹಾಮಾರಿ ಜನರನ್ನು ಕಾಡುತ್ತಾ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಆದರೆ ಜಿಲ್ಲೆಯ ಸೋಂಕಿತರಲ್ಲಿ ಕೊರೊನಾ ಲಕ್ಷಣಗಳೇ ಇಲ್ಲದಿರುವುದು ಆರೋಗ್ಯ ಇಲಾಖೆಗೆ ಹೊಸ ತಲೆ ನೋವಾಗಿ ಪರಿಣಮಿಸಿದೆ.

ವಿಶ್ವದೆಲ್ಲೆಡೆ ಕೊರೊನಾ ಸೋಂಕಿತರು ಹಲವು ರೋಗ ಲಕ್ಷಣಗಳಿಂದ ನರಳುತ್ತಿದ್ದರೆ ಜಿಲ್ಲೆಯಲ್ಲಿ ಸದ್ಯ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರು ವಿಭಿನ್ನವಾಗಿ ಕಂಡು ಬಂದಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಒಟ್ಟು 18 ಮಂದಿ ಕೊರೊನಾ ಸೋಂಕಿತರಿದ್ದು, ಯಾರೊಬ್ಬರಲ್ಲೂ ಕೂಡಾ ಸಣ್ಣ ಪ್ರಮಾಣದಲ್ಲೂ ಕೊರೊನಾ ಸೋಂಕಿನ ಗುಣಲಕ್ಷಣಗಳೂ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಪತ್ತೆಯಾಗಿರುವ ರೋಗಿಗಳ ಸಂಖ್ಯೆ, 907, 1812, 2147 ಸೋಂಕಿತರಲ್ಲೂ ಕೂಡಾ ಈವರೆಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಅವರಿಗೆ ಕನಿಷ್ಠ ಉಸಿರಾಟದ ತೊಂದರೆ ಕೆಮ್ಮು, ನೆಗಡಿಯಂತ ಲಕ್ಷಣಗಳೂ ಕೂಡಾ ಕಂಡು ಬಂದಿಲ್ಲ.

CORONA VIRUS 5

ಸದ್ಯ ಆರೋಗ್ಯ ಇಲಾಖೆಗೆ ತಲೆನೋವಾಗಿರುವ ಅಂಶ ಎಂದರೆ ಸೋಂಕಿತರಲ್ಲೂ ರೋಗ ಲಕ್ಷಣ ಇಲ್ಲ. ಅವರ ಪ್ರಾಥಮಿಕ ಸಂಪರ್ಕ ಹೊಂದಿರುವವರಲ್ಲೂ ರೋಗ ಲಕ್ಷಣಗಳಿಲ್ಲ ಪರಿಣಾಮ ಸೋಂಕಿತರನ್ನು ಪತ್ತೆ ಮಾಡುವುದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಜಿಲ್ಲೆಯ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳ ಮೂಲಕ ರ್‍ಯಾಂಡಮ್ ಟೆಸ್ಟ್ ಗಳನ್ನು ಮಾಡುವ ಮೂಲಕ ಕೊರೊನಾ ಸೋಂಕನ್ನು ಪತ್ತೆ ಮಾಡುವ ಕೆಲಸ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಎಪಿಎಂಸಿ ಮಾರುಕಟ್ಟೆಗಳಿಂದ ಹೊರ ರಾಜ್ಯಗಳಿಗೆ ಹೋಗಿ ಬರುತ್ತಿದ್ದ ಚಾಲಕರಿಗೆ ಹೆಚ್ಚಾಗಿ ಸೋಂಕು ಕಾಣಿಸಿದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಹೋಗಿ ಬರುವ ವ್ಯಕ್ತಿಗಳ ಪ್ರರಕಣಗಳನ್ನು ಹೈರಿಸ್ಕ್ ಕೇಸ್ ಎಂದು ಪರಿಗಣಿಸಲಾಗುತ್ತಿದೆ. ಹೊರ ರಾಜ್ಯಕ್ಕೆ ಹೋಗಿ ಬರುವ ಚಾಲಕರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.

corona 16

ಮಾಹಿತಿ ನೀಡದೆ ಹೊರ ರಾಜ್ಯಗಳಿಗೆ ಭೇಟಿ ನೀಡಿದ್ದ ಚಾಲಕರನ್ನು ಪತ್ತೆ ಮಾಡಲು ಪೊಲೀಸ್ ಇಲಾಖೆ ಸಹಾಯವನ್ನು ಪಡೆಯಲಾಗುತ್ತಿದೆ. ಹೊರ ರಾಜ್ಯಗಳಿಗೆ ಹೋಗಿ ಬಂದಿರುವ ಚಾಲಕರ ಮೊಬೈಲ್ ಟವರ್ ಲೊಕೇಶ್‍ನ ಟ್ರೇಸ್ ಮಾಡುವ ಮೂಲಕ ಅಂತ ಚಾಲಕರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಕಾರಣ ಸೋಂಕಿತರಲ್ಲಿ ರೋಗ ಲಕ್ಷಣ ಕಾಣಿಸದಿದ್ದರೂ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರಲ್ಲಿ ರೋಗ ಹರಡುತ್ತಿದೆ. ಉದಾಹರಣೆ ರೋಗಿ ಸಂಖ್ಯೆ 1587, ರೋಗಿ ಸಂಖ್ಯೆ 1946, ರೋಗಿ ಸಂಖ್ಯೆ 1128 ಚಾಲಕರಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರ ಪತ್ನಿ ಮತ್ತು ಮಕ್ಕಳ ಕೊರೊನಾ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈಗಾಗಿ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೋಂಕಿತರನ್ನು ಪತ್ತೆ ಮಾಡುವ ಸವಾಲಿನ ಕೆಲಸ ಎದುರಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಲಕ್ಷಣಗಳು ಕಂಡುಬರದಿರವುದು ಬಹು ದೊಡ್ಡ ಅಘಾತ ನೀಡುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *