ಗದಗ: ಜಿಲ್ಲೆಯನ್ನು 5 ದಿನ ಸಂಪೂರ್ಣ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಜಿಲ್ಲಾಡಳಿತ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 27 ಬೆಳಗ್ಗೆ 10 ಗಂಟೆಯಿಂದ ಜೂನ್ 1 ರವರೆಗೆ ಕಠಿಣ ಲಾಕ್‍ಡೌನ್ ಮಾಡಲಾಗುವುದು ಎಂದರು. ಈ ಅವಧಿಯಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗದಿದ್ದಲ್ಲಿ ಮತ್ತೆ ಲಾಕ್‍ಡೌನ್ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಕಠಿಣ ಲಾಕ್‍ಡೌನ್ ಸಂದರ್ಭದಲ್ಲಿ ತರಕಾರಿ, ಹಣ್ಣು, ಹೂವು ವ್ಯಾಪಾರಸ್ಥರು ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡಬೇಕು. ಎಲ್ಲಾ ಬಗೆಯ ಮಾರುಕಟ್ಟೆಗಳ ಬಂದ್ ಇರಲಿವೆ. ತಳ್ಳು ಗಾಡಿಯವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ವ್ಯಾಪಾರ ಮಾಡಬೇಕು. ಹಾಲು ಮಾರಾಟ ಪ್ರತಿದಿನ ಬೆಳಿಗ್ಗೆ 8 ಗಂಟೆ ವರೆಗೆ ಅವಕಾಶವಿದ್ದು, ಕಿರಾಣಿ, ದಿನಸಿ ಸಾಮಗ್ರಿಗಳಿಗೆ ಹೋಮ್ ಡಿಲೆವರಿಗೆ ಮಾತ್ರ ಅವಕಾಶ. ರೈತರು ಕೃಷಿ ವಸ್ತುಗಳನ್ನು ಖರೀದಿ ಮಾಡಲು ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶವಿದೆ. ಆದ್ರೆ ಕೃಷಿ ಚಟುವಟಿಕೆಗಳ ನೆಪದಲ್ಲಿ ಸುಖಾಸುಮ್ಮನೆ ಓಡಾಡಿದ್ರೆ ಅವರ ಮೇಲು ಸೂಕ್ತ ಕ್ರಮ ಜರುಗುವುದು. ನಗರ ಹಾಗೂ ಹಳ್ಳಿಗಳಲ್ಲಿಯೂ ಸಹ ಎಲ್ಲಾ ಬಗೆಯ ಹೋಟೆಲ್, ಅಂಗಡಿಗಳು ಬಂದ್. ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಸರ್ಕಾರದ ನಿಯಮಗಳು ಪಾಲನೆ ಆಗುತ್ತಿಲ್ಲ. ಆದ್ರೆ 27 ರ ನಂತರ ಪಾಲನೆ ಆಗದಿದ್ರೆ ಆ ಭಾಗದ ಅಧಿಕಾರಿಗಳು ಹೊಣೆಗಾರಿಕೆ ಮಾಡಲಾಗುತ್ತದೆ ಎಂದರು.
ಇನ್ನು ಬಾರ್ ಹಾಗೂ ವೈನ್ ಶಾಪ್, ಮಾಂಸದಂಗಡಿ ಸಹ ಓಪನ್ ಹಾಗೂ ಪಾರ್ಸೆಲ್ ಗೆ ಅವಕಾಶ ಇರುವುದಿಲ್ಲ. ಎಲ್ಲಾ ಬಂದ್ ಇರಲಿವೆ. ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಸಿಬ್ಬಂದಿ ಕಚೇರಿಯ ಹಾಗೂ ಬ್ಯಾಂಕ್ ನಲ್ಲಿ ಜನ ಸೇರಿಸುವಂತಿಲ್ಲ. ಕಚೇರಿ ಬಾಗಿಲು ಹಾಕಿಕೊಂಡು ಒಳಗಡೆ ಕಚೇರಿ ಕೆಲಸ ಮಾಡಬೇಕು ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದರು. ಈ ಸುದ್ದಿಗೋಷ್ಠಿನಲ್ಲಿ ಜಿಲ್ಲಾಧಿಕಾರಿ ಸುಂದರೇಶ್ ಬಾಬು, ಸಿ.ಇ.ಓ, ಭರತ್, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.