ದಾವಣಗೆರೆ: ಆಕೆ ಪ್ರತಿಭಾವಂತ ವಿದ್ಯಾರ್ಥಿನಿ ಪಿಯುಸಿಯಲ್ಲಿ ಐದು ವಿಷಯಗಳಲ್ಲಿಯೇ ಶೇ.93 ರಷ್ಟು ಅಂಕ ಪಡೆದಿದ್ದಳು. ಆದರೆ ಈ ಫಲಿತಾಂಶವನ್ನು ನೋಡಿ ಸಂಭ್ರಮಿಸಲು ಆಕೆಯೇ ಇಲ್ಲವಾಗಿದ್ದಾಳೆ.
ದಾವಣಗೆರೆಯ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಓದುತ್ತಿದ್ದ ಅನುಷಾ ಬಿ ಪ್ರತಿಭಾವಂತ ವಿದ್ಯಾರ್ಥಿನಿ. ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದ ಈಕೆಗೆ ಜೀವನದಲ್ಲಿ ಏನಾದರೂ ಸಾಧಿಸುವ ಅದಮ್ಯ ಬಯಕೆಯಿತ್ತು. ಮಾರ್ಚ್‍ನಲ್ಲಿ ಪಿಯುಸಿಯ ಐದು ವಿಷಯಗಳಿಗೆ ಪರೀಕ್ಷೆ ಬರೆದಿದ್ದಳು. ಕೊರೊನಾ ಲಾಕ್‍ಡೌನ್‍ನಿಂದ ಇಂಗ್ಲಿಷ್ ಪರೀಕ್ಷೆ ಮುಂದೂಡಿದ್ದರಿಂದ ತನ್ನೂರು ಚನ್ನಗಿರಿಯ ತಾಳಿಕಟ್ಟೆಗೆ ತೆರಳಿದ್ದಳು.
ಇಂಗ್ಲಿಷ್ ವಿಷಯದಲ್ಲೂ ಚೆನ್ನಾಗಿ ಅಂಕಗಳಿಸುವ ಗುರಿ ಹೊಂದಿದ್ದಳು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಈಕೆಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ಉಡುಪಿಯ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ ಬಳಿಕ ವಿದ್ಯಾರ್ಥಿನಿಗೆ ಬ್ಲಡ್ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು.
ಚಿಕಿತ್ಸೆಯ ನಡುವೆಯೂ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಕಾಲೇಜಿನ ಆಡಳಿತ ಮಂಡಳಿಯವರೂ ಸಾಕಷ್ಟು ಧೈರ್ಯ ತುಂಬಿದ್ದರು. ಪರೀಕ್ಷೆ ಬರೆಯುವ ಆಸೆ ಅವಳಲ್ಲಿತ್ತು. ನೀಟ್ ಪರೀಕ್ಷೆಗೂ ಸಿದ್ಧವಾಗುತ್ತಿದ್ದಳು. ಈ ನಡುವೆ ಇಂಗ್ಲಿಷ್ ಪರೀಕ್ಷೆ ಜೂನ್ 18ಕ್ಕೆ ನಿಗದಿಯಾಯಿತು. ಆದರೆ ಪರೀಕ್ಷೆಯ ಒಂದು ದಿನ ಬಾಕಿ ಇರುವಾಗ ಅನುಷಾ ಅಸುನೀಗಿದ್ದು, ಕುಟುಂಬ ವರ್ಗ ಮತ್ತು ಆಪ್ತ ವಲಯದವರ ದುಃಖ ಮಡುಗಟ್ಟಿತ್ತು.
ಕಳೆದ ಬುಧವಾರ ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಕನ್ನಡ 92, ಭೌತಶಾಸ್ತ್ರ 91, ರಸಾಯನಶಾಸ್ತ್ರ 89, ಗಣಿತ 100, ಜೀವಶಾಸ್ತ್ರ 95 ಅಂಕಗಳಿಸಿದ್ದಾಳೆ. ವೈದ್ಯಳಾಗುವ ಕನಸು ಕಾಣುತ್ತಿದ್ದ ಅನುಷಾಳ ಆಸೆ ಅರ್ಧದಲ್ಲೇ ಮುಗಿದು ಹೋಗಿದೆ. ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಸಂಭ್ರಮಿಸಲು ಅವಳೇ ಇಲ್ಲವಾಗಿದ್ದಾಳೆ.