ಇತ್ತೀಚೆಗೆ ಸಾಧನೆ ತೋರಿದ ಖ್ಯಾತ ನಟ-ನಟಿಯರು, ಕ್ರಿಕೆಟಿಗರು, ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡವರ ಕುರಿತು ಸಿನಿಮಾಗಳನ್ನು ಮಾಡಲಾಗುತ್ತಿದೆ. ಇದೇ ರೀತಿ ಇದೀಗ ಖ್ಯಾತ ಬಹುಭಾಷಾ ನಟಿ ದಿವಂಗತ ಸೌಂದರ್ಯ ಅವರು ಜೀವನ ಚರಿತ್ರೆ ಕುರಿತು ಬಯೋಪಿಕ್ ಮೂಡಿ ಬರಲಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.
ಹೌದು. ಸೌಂದರ್ಯ ಬಯೋಪಿಕ್ ನಿರ್ಮಾಣ ಮಾಡುವ ಬಗ್ಗೆ ಅನೇಕ ವರ್ಷಗಳಿಂದ ಮಾತು ಕೇಳಿಬರುತ್ತಿದ್ದು, ಇದುವರೆಗೆ ಅದು ಸಾಧ್ಯವಾಗಿಲ್ಲ. ಇದೀಗ ಮತ್ತೆ ಸೌಂದರ್ಯ ಜೀವನಚರಿತ್ರೆಯನ್ನು ಸಿನಿಮಾ ಮಾಡುವ ವಿಚಾರ ಮುನ್ನೆಲೆಗೆ ಬಂದಿದೆ. ತೆಲುಗು ನಿರ್ಮಾಪಕರೊಬ್ಬರು ಬಯೋಪಿಕ್ ನಿರ್ಮಾಣ ಮಾಡುವ ಬಗ್ಗೆ ಸೌಂದರ್ಯ ಕುಟುಂಬದ ಜೊತೆ ಮಾತುಕತೆ ಕೂಡ ನಡೆಸುತ್ತಿದ್ದು, ಕುಟುಂಬದ ಒಪ್ಪಿಗೆಗೆ ಕಾಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಅದ್ಭುತ ನಟಿ ಸೌಂದರ್ಯ ಬಯೋಪಿಕ್ ನಲ್ಲಿ ಯಾರು ನಟಿಸುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
ಈ ಚಿತ್ರದಲ್ಲಿ ಸೌಂದರ್ಯ ಅವರ ಪಾತ್ರವನ್ನು ಮಲಯಾಳಂ ನಟಿ ಸಾಯಿಪಲ್ಲವಿ ನಿಭಾಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಾಯಿ ಪಲ್ಲವಿಗೆ ತೆಲುಗಿನಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ಸೌಂದರ್ಯಾ ಬಯೋಪಿಕ್ಗೆ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ಮಾಹಿತಿ ಕೇಳಿಬಂದಿದೆ. ತಮ್ಮ ಅದ್ಭುತ ನಟನೆ ಮೂಲಕವೇ ಎಲ್ಲರ ಗಮನಸೆಳೆದಿರುವ ಸಾಯಿ ಪಲ್ಲವಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ಸಾಯಿ ಪಲ್ಲವಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಜಾಣ್ಮೆಯಿಂದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕೆಲಸ ಮಾಡುವ ಮೂಲಕ ಸೌಂದರ್ಯ ಕೂಡ ಬಹುಭಾಷಾ ನಟಿಯಾಗಿ ಗಮನಸೆಳೆದವರಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದ ನಟಿ ಸೌಂದರ್ಯ, ಎಲ್ಲಾ ಭಾಷೆಯಲ್ಲೂ ನಟಿಸಿದ್ದಾರೆ. 2004ರಲ್ಲಿ ವಿಮಾನ ದುರಂತದಲ್ಲಿ ಇಹಲೋಕ ತ್ಯಜಿಸಿದರು. ಒಟ್ಟಿನಲ್ಲಿ ಭಾರೀ ಚರ್ಚೆಯಲ್ಲಿರುವ ಸೌಂದರ್ಯ ಬಯೋಪಿಕ್ ನಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಸದ್ಯದ ಕುತೂಹಲ.