ತುಮಕೂರು: ಖಾಸಗಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಪರಿಹಾರ ಘೋಷಣೆ ಮಾಡುವಂತೆ ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರುಗಳು ಸಿಎಂ ಯಡಿಯೂರಪ್ಪರ ಅವರಿಗೆ ಮನವಿ ಮಾಡಿದ್ದಾರೆ.
ಇಂದು ಸಿಎಂ ಗೃಹ ಕಚೇರಿಗೆ ಭೇಟಿಕೊಟ್ಟ ತುರುವೇಕೆರೆ ಶಾಸಕ ಮಸಾಲಾ ಜಯರಾಮ್, ನಗರ ಶಾಸಕ ಜ್ಯೋತಿಗಣೇಶ್ ಹಾಗೂ ಶಿರಾ ಶಾಸಕ ರಾಜೇಶ್ ಗೌಡರು ಸಿಎಂಗೆ ಮನವಿ ಪತ್ರ ನೀಡಿದ್ದಾರೆ. ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಲಾಕ್‍ಡೌನ್ ನಿಂದಾಗಿ ಸಂಬಳ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಅಂಥವರ ನೆರವಿಗೆ ಸರ್ಕಾರ ಧಾವಿಸಿ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮನ ಬಂದಂತೆ ಕೊರೊನಾ ಚಿಕಿತ್ಸೆ ನೀಡುವಂತಿಲ್ಲ- ಮಾಧುಸ್ವಾಮಿ
ಶಾಸಕರುಗಳ ಮನವಿಗೆ ಸ್ಪಂದಿಸಿದ ಸಿಎಂ ಶೀಘ್ರದಲ್ಲೇ ಪರಿಹಾರ ಘೋಷಣೆ ಮಾಡುವ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಇದರ ಜೊತೆ ತುಮಕೂರು ಜಿಲ್ಲೆಯಲ್ಲಿ ನೇಕಾರರು ದೊಡ್ಡ ಸಂಖ್ಯೆಯಲ್ಲಿ ಇದ್ದು ವ್ಯಾಪಾರ ಇಲ್ಲದೇ ಸಂಕಷ್ಟದಲ್ಲಿ ಇದ್ದಾರೆ. ಅವರಿಗೂ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.