ಬೆಂಗಳೂರು: ಸಾರಿಗೆ ನೌಕರರು ಇಂದು ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತಿರೋದನ್ನ ಬಂಡವಾಳ ಮಾಡಿಕೊಂಡಿರುವ ಖಾಸಗಿ ವಾಹನಗಳು ಮತ್ತು ಆಟೋಗಳು ಸುಲಿಗೆಗೆ ಇಳಿದಿವೆ.
ಪಬ್ಲಿಕ್ ಟಿವಿ ನಡೆಸಿರುವ ಸ್ಟಿಂಗ್ ಆಪರೇಷನ್ ನಲ್ಲಿ ಹಗಲುದರೋಡೆಯ ದೃಶ್ಯಗಳು ಸೆರೆಯಾಗಿವೆ. ಬೆಂಗಳೂರಿನಿಂದ ಮೈಸೂರಿಗೆ 140 ರೂಪಾಯಿ ಇದೆ. ಆದ್ರೆ ಖಾಸಗಿ ವ್ಯಾನ್, ಟಿಟಿಗಳು ಪ್ರತಿ ಸೀಟ್ ಗೆ 500 ರೂ. ಪಡೆಯುತ್ತಿವೆ. ಇನ್ನು ಸಿಲಿಕಾನ್ ಸಿಟಿಯ ಆಟೋ ಚಾಲಕರು ಹಗಲು ದರೋಡೆಗೆ ಮುಂದಾಗಿದ್ದಾರೆ. ಮೂರರಿಂದ ನಾಲ್ಕು ಕಿಲೋ ಮೀಟರ್ ದೂರದ ಪ್ರಯಾಣಕ್ಕೆ ಮೀಟರ್ ಹಾಕದೇ ನಾಲ್ಕು ನೂರು ರೂಪಾಯಿಯಿಂದ ಐನೂರು ರೂಪಾಯಿ ಕೇಳುತ್ತಿದ್ದಾರೆ.
ಸಾರಿಗೆ ನೌಕರರು ದಿಢೀರ್ ಪ್ರತಿಭಟನೆಗೆ ಮುಂದಾಗಿರೋದರಿಂದ ಈ ಸಮಸ್ಯೆಗೆ ಕಾರಣವಾಗಿದೆ. ಪ್ರತಿಭಟನೆ ಮತ್ತು ಬಸ್ ಬಂದ್ ಮಾಡುವ ದಿನವನ್ನ ಮೊದಲೇ ತಿಳಿಸಿದ್ರೆ ನಾವುಗಳು ಇಲ್ಲಿಗೆ ಬರುತ್ತಿರಲಿಲ್ಲ. ಸರ್ಕಾರ ಸಹ ಆದಷ್ಟು ಬೇಗ ಪ್ರತಿಭಟನಾನಿರತರ ಮನವೊಲಿಸಿ ಸಂಚಾರಕ್ಕೆ ಅನಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಂದ್ ಮಾಹಿತಿ ಇಲ್ಲದೇ ಬೆಂಗಳೂರಿಗೆ ಆಗಮಿಸಿರುವ ಪ್ರಯಾಣಿಕರು ಸಂಜೆ ಊರುಗಳಿಗೆ ತೆರಳಲು ಖಾಸಗಿ ವಾಹನಗಳನ್ನ ಅವಲಂಬಿಸಬೇಕಾಗಿದೆ. ಕೆಲವರು ಪ್ರಯಾಣವನ್ನ ರದ್ದುಗೊಳಿಸಿದ್ರೆ, ಅನಿವಾರ್ಯವಿದ್ರೂ ಸರ್ಕಾರಕ್ಕೆ ಹಿಡಿಶಾಪ ಹಾಕಿ ಮೂರು ಪಟ್ಟ ಹಣ ನೀಡಿ ಊರುಗಳತ್ತ ಹೊರಟಿದ್ದಾರೆ.