ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಿಂದ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿರುವುದನ್ನು ವಿರೋಧಿಸಿ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸಿದ್ದಲಿಂಗಯ್ಯ ವೃತ್ತದಿಂದ ಬೈಕ್‍ಗಳನ್ನು ತಳ್ಳಿಕೊಂಡು ಖಾಲಿ ಸಿಲಿಂಡರ್ ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಿದರು.
ಕಳೆದ ವರ್ಷದಿಂದ ಇಡೀ ಜಗತ್ತನ್ನೆ ಕಾಡಿದ ಮಹಾಮಾರಿ ಕರೊನಾ ವೈರಸ್ ಭಾರತದ ಮಧ್ಯಮ ವರ್ಗದವರ ಪಾಲಿಗೆ ಸಹಿಸಲಾರದ ಪೆಟ್ಟು ನೀಡಿತ್ತು ಹಲವಾರು ಕಂಪನಿಗಳು ಬಾಗಿಲು ಮುಚ್ಚಿದ ಪರಿಣಾಮ ಕಾರ್ಮಿಕರು ನಿರುದ್ಯೋಗಿಗಳಾದರು. ವ್ಯಾಪಾರ, ವ್ಯವಹಾರ ನೆಲ ಕಚ್ಚಿದವು, ದಿನಗೂಲಿ ನೌಕರರು ಊಟಕ್ಕೂ ಪರದಾಡುವಂತಾಗಿದೆ. ಇಂತಹ ಸಮಯದಲ್ಲಿ ಜನರ ಸಹಾಯಕ್ಕೆ ಬರಬೇಕಿದ್ದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗಾಯದ ಮೇಲೆ ಬರೆ ಎಳೆಯುತ್ತಿದೆ. ಡಿಸೇಲ್, ಪೆಟ್ರೋಲ್ ಬೆಲೆ ಏರುತ್ತಿದ್ದು ಗ್ಯಾಸ್ ಮೇಲಿನ ಸಬ್ಸಿಡಿ ರದ್ದುಗೊಳಿಸಿದ್ದಲ್ಲದೆ, 50 ರೂ ಹೆಚ್ಚು ಮಾಡಿರುವ ಪರಿಣಾಮ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ.ಕೂಡಲೇ ಸರ್ಕಾರಗಳು ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಮೇಲಿನ ಭರವಸೆಯಿಂದ ಎರಡನೇ ಬಾರಿಗೆ ಅತಿ ಹೆಚ್ಚು ಮತಗಳನ್ನು ನೀಡಿ ಅಧಿಕಾರ ನೀಡಲಾಯಿತು. ಆದರೆ ಇತ್ತೀಚಿನ ನಡುವಳಿಕೆ ಜನರನ್ನು ಭ್ರಮನಿರಸನಗೊಳಿಸಿದೆ. ನಾವು ಕೂಡ ಮೋದಿ ಅಭಿಮಾನಿಗಳೇ. ಆದರೆ ಮಾಡಿದ್ದನ್ನೆಲ್ಲ ಸರಿ ಎನ್ನುವ ಅಂದಾಭಿಮಾನ ನಮ್ಮಲ್ಲಿ ಇಲ್ಲ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.