-ಪ್ರವಾಹ ಇಳಿಮುಖ, ಮುಳಗಡೆಯಾದ ಮನೆಗಳ ಸ್ವಚ್ಛತೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರವಾಹ ತಗ್ಗಿದರೂ ಅವಘಡಗಳು ಮಾತ್ರ ನಿಲ್ಲುತ್ತಿಲ್ಲ. ಸಿದ್ದಾಪುರದಿಂದ ಗುಹ್ಯ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ ಕ್ಷಣ ಕ್ಷಣಕ್ಕೂ ಕುಸಿಯುತ್ತಿದ್ದು, ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯ ರಸ್ತೆಯನ್ನು ಕಾವೇರಿ ನದಿ ಆಪೋಷಣೆ ತೆಗೆದುಕೊಳ್ಳುತ್ತಿದೆ. ಕಳೆದ ನಾಲ್ಕು ದಿನದಿಂದ ಪ್ರವಾಹದ ನೀರಿನಿಂದ ರಸ್ತೆ ಸಡಿಲಗೊಂಡಿದ್ದರಿಂದ ಕುಸಿಯಲಾರಂಭಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಸ್ತೆ ಮೂಲಕ ತೆರಳಲು ಗ್ರಾಮಸ್ಥರು ಭಯ ಪಡುವಂತಾಗಿದೆ.
Advertisement
Advertisement
ಮುಳಗಡೆಯಾದ ಮನೆಗಳ ಸ್ವಚ್ಛತೆ: ಕೊಡಗು ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಸುರಿದಿದ್ದ ರಣಭೀಕರ ಮಳೆಗೆ ಕಾವೇರಿ ನದಿ ಉಕ್ಕಿ ಹರಿದು ಕೊಡಗಿನ ಹಲವು ಗ್ರಾಮಗಳು ಪ್ರವಾಹದಲ್ಲಿ ನಾಲ್ಕು ದಿನಗಳ ಕಾಲ ಮುಳುಗಿ ಹೋಗಿದ್ದವು. ಇದೀಗ ಪ್ರವಾಹದ ನೀರು ತಗ್ಗಿದ್ದು, ಜನರು ಮನೆಗಳ ಸ್ವಚ್ಛತೆಗೆ ಮುಂದಾಗಿದ್ದಾರೆ.
Advertisement
Advertisement
ಕೊಡಗಿನ ಕುಶಾಲನಗರದ ಹಲವು ಬಡಾವಣೆಗಳು ಮುಳುಗಡೆಯಾಗಿದ್ದವು. ಅಲ್ಲದೆ ನಾಪೋಕ್ಲು ಸಮೀಪದ ಚೆರಿಯಪರಂಬು, ಸಿದ್ದಾಪುರ ಕರಡಿಗೋಡು, ಕುಂಬಾರಗುಂಡಿ, ಬೆಟ್ಟದಕಾಡು, ಗುಹ್ಯ ಸೇರಿದಂತೆ ಹಲವು ಗ್ರಾಮಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದವು. ಇದೀಗ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದಂತೆ ಇದೀಗ ಕೆಲ ಜನರು ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ಕೆಲವರು ತಮ್ಮ ಮನೆಗಳನ್ನು ತೊಳೆದು ಸ್ವಚ್ಛಗೊಳಿಸುತ್ತಿದ್ದಾರೆ. ಮತ್ತೆ ಕೆಲವರು ಸಂಪುಗಳಿಗೆ ಗಲೀಜು ನೀರು ತುಂಬಿಕೊಂಡಿರುವುದರಿಂದ ಸಂಪಿನ ಇಡೀ ನೀರನ್ನು ಮೋಟರ್ ಗಳ ಮೂಲಕ ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿದ್ದಾರೆ.
ಇನ್ನು ಮಹಿಳೆಯರು ತಮ್ಮ ಮನೆಗಳ ವಸ್ತುಗಳನೆಲ್ಲಾ ತೆಗೆದು ಸ್ವಚ್ಛಗೊಳಿಸುತ್ತಿದ್ದಾರೆ. ಮತ್ತೊಂದೆಡೆ ಪ್ರವಾಹದ ನೀರು ತಗ್ಗುತ್ತಿದ್ದಂತೆ ಕುಶಾಲನಗರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪ್ರತೀ ಬೀದಿಗಳಿಗೆ ಬ್ಲೀಚಿಂಗ್ ಸಿಂಪಡಿಸಿದ್ದಾರೆ. ಪ್ರವಾಹದಲ್ಲಿ ತೇಲಿಬಂದಿದ್ದ ಅಪಾರ ಪ್ರಮಾಣದ ಕೆಸರು ಕಸಕಡ್ಡಿ ಪ್ರತೀ ಬಡಾವಣೆಯಲ್ಲಿ ಸಾಕಷ್ಟು ತುಂಬಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹೀಗಾಗಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಬ್ಲೀಚಿಂಗ್ ಸಿಂಪಡಣೆ ಮಾಡಿದ್ದಾರೆ.