ರಾಯಚೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಹಮಾಲಿಗಳಿಗಾಗಿ ಆಯೋಜಿಸಿದ್ದ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಆಗಿದೆ. ಕೊರೊನಾ ನಿಯಮವನ್ನು ಗಾಳಿಗೆ ತೂರಿ ಜನರು ಲಸಿಕೆಗಾಗಿ ಮುಗಿಬಿದ್ದಿದ್ದರು.
ನಗರದ ಎಪಿಎಂಸಿ ಕಚೇರಿ ಬಳಿ ಲಸಿಕೆಗೆ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಹಮಾಲರು, ಸಿಬ್ಬಂದಿ, ವರ್ತಕರಿಗಾಗಿ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ಇದರ ಅಂಗವಾಗಿ ಇಂದು ಹಮಾಲಿಗಳಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಿತ್ತು. ಹಮಾಲರ ಜೊತೆ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದು, ನೂಕು ನುಗ್ಗಲು ಉಂಟಾಗಿದೆ.
ಲಸಿಕೆ ಹಾಕಿಸಿಕೊಳ್ಳಲು ಬಂದ ಹಮಾಲರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಇತ್ತು. ಸಾಮಾಜಿಕ ಅಂತರ, ಮಾಸ್ಕ್ ಮರೆತು ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಬೆಳಿಗ್ಗೆಯಿಂದ 30 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಎಪಿಎಂಸಿ ಯಲ್ಲಿ ಒಟ್ಟು 687 ಜನ ಹಮಾಲಿಗಳು ಇದ್ದಾರೆ. ಅದರಲ್ಲಿ 407 ಜನ 18 ರಿಂದ 45 ವರ್ಷದೊಳಗಿನವರಿದ್ದಾರೆ. ಇದರಲ್ಲಿ 75 ಜನಕ್ಕೆ ಅಧಿಕಾರಿಗಳೇ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ಕರೆದಿದ್ದರು. ಆದರೆ ನಮಗೂ ಮೆಸೇಜ್ ಬಂದಿದೆ ಅಂತ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಸಂಚಾರಿ ಕೋವಿಡ್ ಚಿಕಿತ್ಸಾ ಆಸ್ಪತ್ರ್ರೆ ಆರಂಭ
ಜಿಲ್ಲೆಯಲ್ಲಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗದೆ, ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಂಚಾರಿ ಕೋವಿಡ್ ಚಿಕಿತ್ಸಾ ಕೇಂದ್ರ ಮತ್ತು ತುರ್ತು ಆಮ್ಲಜನಕ ಸಹಾಯ ಘಟಕದ ವ್ಯವಸ್ಥೆಯನ್ನ ಸಾರಿಗೆ ಬಸ್‍ಗಳಲ್ಲಿ ಮಾಡಲಾಗುತ್ತಿದೆ. ಎನ್.ಈ.ಕೆ.ಎಸ್.ಆರ್. ಟಿ.ಸಿಯ ಮೂರು ಬಸ್‍ಗಳನ್ನ ಸಂಚಾರಿ ಚಿಕಿತ್ಸಾ ಕೇಂದ್ರಕ್ಕೆ ಜಿಲ್ಲಾಡಳಿತ ಬಳಸಿಕೊಳ್ಳುತ್ತಿದೆ. ಬಸ್‍ನಲ್ಲಿ 4 ಬೆಡ್ ಹಾಗೂ ಸೋಂಕಿತರು ಕುಳಿತುಕೊಂಡು ಆಕ್ಸಿಜನ್ ಪಡೆಯಲು 4 ಸೀಟ್ ವ್ಯವಸ್ಥೆ ಮಾಡಲಾಗಿದೆ. ಬಸ್‍ನಲ್ಲಿ 5 ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆಯಿದೆ. ಈ ಮೂರು ಬಸ್‍ಗಳನ್ನ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ತಾಲೂಕಾಸ್ಪತ್ರೆ ಮುಂದೆ ನಿಲ್ಲಿಸಲಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಸಿಗದವರು, ಉಸಿರಾಟ ತೊಂದರೆ ಉಂಟಾದವರಿಗೆ ಬಸ್ ನಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ