ಮಡಿಕೇರಿ: ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರ ಈಗಾಗಲೇ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಸೂಚಿಸಿದೆ. ಆದರೆ ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಡೆಂಟಲ್ ಕಾಲೇಜು ಆಡಳಿತ ಮಂಡಳಿ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ಕಾಲೇಜು ನಡೆಸದಂತೆ ಸ್ಪಷ್ಟ ಸೂಚನೆ ಇದ್ದರೂ ಕಾಲೇಜನ್ನು ನಡೆಸುತ್ತಿತ್ತು. ಹಾಗಾಗಿ ಇದೀಗ ಕಾಲೇಜು ವಿರುದ್ಧ ಎಫ್‍ಐಆರ್ ದಾಖಲಾಗಿದೆ.
Advertisement
ಡೆಂಟಲ್ ಕಾಲೇಜಿನಲ್ಲಿ ತರಗತಿಗಳು ನಡೆಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ತಹಶೀಲ್ದಾರ್ ಆರ್.ಯೋಗಾನಂದ್ ಅವರು ವಿರಾಜಪೇಟೆ ಪಟ್ಟಣ ಪೊಲೀಸರೊಂದಿಗೆ ಕಾಲೇಜಿನ ಮೇಲೆ ಏಕಾಏಕಿ ದಾಳಿ ಮಾಡಿದರು. ಈ ವೇಳೆ ಕಾಲೇಜಿನಲ್ಲಿ ಕೋವಿಡ್ ನಿಯಮಗಳನ್ನು ಮೀರಿ ಆಂತರಿಕ ಪರೀಕ್ಷೆಗಳನ್ನು ನಡೆಸುತ್ತಿರುವುದನ್ನು ಸ್ವತಃ ತಹಶೀಲ್ದಾರ್ ಖುದ್ದು ವೀಕ್ಷಿಸಿದರು. ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲ್ಯಾಬ್ ತರಗತಿಗಳನ್ನು ನಡೆಸುತ್ತಿದ್ದನ್ನು ಗಮನಿಸಿದರು. ಈ ವೇಳೆ ಉಪನ್ಯಾಸಕರನ್ನು ವಿಚಾರಿಸಿದಾಗ ನಾವು ಯಾವುದೇ ತರಗತಿ ನಡೆಸುತ್ತಿರಲಿಲ್ಲ. ಸಂಶೋಧನೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದೆವು ಎಂದು ಸಮಾಜಾಯಿಷಿ ನೀಡಿದ್ದಾರೆ.
Advertisement
Advertisement
ಇದೇ ವೇಳೆ ತರಗತಿ ಕೊಠಡಿಗಳಿಂದ ಹೊರಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಕೇಳಿದಾಗ ವಿದ್ಯಾರ್ಥಿಗಳು ಲ್ಯಾಬ್ ತರಗತಿಯಲ್ಲಿ ಇದ್ದೇವು ಎನ್ನೋದನ್ನು ಒಪ್ಪಿಕೊಂಡರು. ಜೊತೆಗೆ ಕಾಲೇಜು ಆವರಣದಲ್ಲಿರುವ ಹೋಟೆಲಿನಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಿಯೇ ಊಟ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳು ಒಂದೊಂದು ಟೇಬಲ್‍ನಲ್ಲೂ ಗುಂಪು ಗುಂಪಾಗಿ ಕುಳಿತು ಊಟ ಮಾಡುತ್ತಿದ್ದರು, ಜೊತೆಗೆ ಕ್ಯಾಂಟೀನ್ ನಲ್ಲೂ ವಿದ್ಯಾರ್ಥಿಗಳು ಕುಳಿತು ವಿವಿಧ ತಿನಿಸುಗಳನ್ನು ತಿನ್ನುತಿದ್ದರು.
Advertisement
ತಕ್ಷಣವೇ ಎಚ್ಚೆತ್ತುಕೊಂಡು ತಹಶೀಲ್ದಾರ್ ಇದ್ದ ಸ್ಥಳಕ್ಕೆ ಬಂದ ಕಾಲೇಜು ಡೀನ್ ತರಗತಿ ನಡೆಸುವುದಕ್ಕೆ ನಮಗೆ ಅವಕಾಶ ಇದೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಆದರೆ ತಹಶೀಲ್ದಾರ್ ಅವರು ಎಲ್ಲವನ್ನೂ ಪರಿಶೀಲಿಸಿ ಕಾಲೇಜು ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸರ್ಕಾರದ ನಿಯಮದ ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಕಾಲೇಜಿನಲ್ಲಿ ಹಲವು ವಿಷಯಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಕಾಲೇಜು ವಿರುದ್ಧ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.