ಮೈಸೂರು: ಕೊರೊನಾ ಎಫೆಕ್ಟ್ ನಿಂದ ಬಹಳಷ್ಟು ಉದ್ಯಮಗಳು ನಷ್ಟದ ಹಾದಿ ಹಿಡಿದಿರುವ ಈ ದಿನಗಳಲ್ಲಿ ಕೋಳಿ ಮೊಟ್ಟೆ ಉದ್ಯಮ ದೊಡ್ಡ ಲಾಭದಲ್ಲಿದೆ. ಕೋಳಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದೆ.
ಜನರು ಪೌಷ್ಟಿಕಾಂಶ ಆಹಾರ ಸೇವನೆಗೆ ಒತ್ತು ನೀಡುತ್ತಿರುವ ಕಾರಣ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಮೊಟ್ಟೆ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿದೆ. ಒಂದೇ ತಿಂಗಳಲ್ಲಿ ಹೆಚ್ಚುವರಿ ಯಾಗಿ 2 ಲಕ್ಷ ಮೊಟ್ಟೆ ಮಾರಾಟವಾಗಿದೆ. ಬೇಡಿಕೆಗೆ ಅನುಗುಣವಾಗಿ ಮೊಟ್ಟೆ ಉತ್ಪಾದನೆ ಆಗದ ಕಾರಣ ಬೆಲೆ ಹೆಚ್ಚಳವಾಗಿದೆ.
ಮೈಸೂರು ಜಿಲ್ಲೆಯಲ್ಲಿ 100 ರಿಂದ 120 ಕೋಳಿ ಫಾರಂಗಳಲ್ಲಿ ಮೊಟ್ಟೆ ಇಡುವ ಕೋಳಿಯನ್ನೇ ಸಾಕಲಾಗುತ್ತಿದೆ. ಈ ಹಿಂದೆ ದಿನವೊಂದಕ್ಕೆ 30 ಲಕ್ಷ ಕೋಳಿ ಮೊಟ್ಟೆ ಉತ್ಪಾದನೆಯಾಗುತ್ತಿದ್ದವು. ಇದೀಗ ವಿವಿಧ ಕಾರಣಗಳಿಂದಾಗಿ ಮೊಟ್ಟೆ ಕೋಳಿಗಳ ಸಾಕಾಣಿಕೆ ಕಡಿಮೆಯಾಗಿದ್ದು, ಇದರಿಂದ ದಿನಕ್ಕೆ 15-16 ಲಕ್ಷ ಮೊಟ್ಟೆಯಷ್ಟೇ ಉತ್ಪಾದನೆಯಾಗುತ್ತಿದೆ.
ಲಾಕ್‍ಡೌನ್‍ಗೂ ಮುನ್ನ ಹೋಟೆಲ್, ಬೇಕರಿ, ಫಾಸ್ಟ್ ಫುಡ್ ಸೇರಿದಂತೆ ಜಿಲ್ಲೆಯಲ್ಲಿ ದಿನವೊಂದಕ್ಕೆ 3 ಲಕ್ಷ ಮೊಟ್ಟೆ ಬಳಕೆಯಾಗುತ್ತಿತ್ತು. ಈಗ ಮೈಸೂರು ಜಿಲ್ಲೆಯಲ್ಲಿ ದಿನವೊಂದಕ್ಕೆ 5- 6 ಲಕ್ಷ ಮೊಟ್ಟೆ ಬಳಕೆಯಾಗುತ್ತಿದೆ. ಈ ಹಿಂದೆ ಮೊಟ್ಟೆಗೆ 300 ರಿಂದ 350 ರೂ. ದರ ನಿಗದಿ ಮಾಡಲಾಗಿತ್ತು.
ಪ್ರಸ್ತುತ 100 ಮೊಟ್ಟೆಗೆ 550 ರೂ. ದರ ನಿಗದಿಯಾಗಿದೆ. ಚಿಲ್ಲರೆ ಅಂಗಡಿಯಲ್ಲಿ ಒಂದು ಮೊಟ್ಟೆಗೆ 6 ರೂ. ಜಿಲ್ಲೆಯಲ್ಲಿ 30 ಲಕ್ಷ ಮೊಟ್ಟೆ ಉತ್ಪಾದನೆಯಾಗುತ್ತಿದ್ದರೆ, ಅದರಲ್ಲಿ 3 ಲಕ್ಷ ಮೊಟ್ಟೆಯನ್ನು ಮೈಸೂರು ಜಿಲ್ಲೆಗೆ ಸರಬರಾಜು ಮಾಡಿ ಉಳಿದ ಮೊಟ್ಟೆಯನ್ನು ಬೇರೆ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆಗ ಬೆಲೆ ಸ್ಥಿರತೆಯಲ್ಲಿ ಇರುತ್ತಿತ್ತು. ಈಗ ಉತ್ಪಾದನಾ ಮಟ್ಟ ಕುಸಿದು ಬೇಡಿಕೆ ಹೆಚ್ಚಾದ ಕಾರಣ ಮೊಟ್ಟೆ ಬೆಲೆ ಏರಿಕೆಯಾಗಿದೆ.