ಕೋಪದಿಂದ ಬ್ಯಾಟ್ ಎಸೆದ ಗೇಲ್‍ಗೆ ಬಿತ್ತು ದಂಡ

Public TV
2 Min Read
Chris Gayle Bat

ಅಬುಧಾಬಿ: ಐಪಿಎಲ್ ಕೋಡ್ ಆಫ್ ಕಂಡಕ್ಟ್ ನಿಯಮಗಳನ್ನು ಮುರಿದ ಕಾರಣ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕ್ರಿಸ್ ಗೇಲ್‍ಗೆ ಪಂದ್ಯದ ಶುಲ್ಕದಲ್ಲಿ ಶೇ.10 ರಷ್ಟು ದಂಡವಾಗಿ ವಿಧಿಸಲಾಗಿದೆ.

ಕ್ರಿಸ್ ಗೇಲ್ ಅವರು ಟಿ-20 ಮಾದರಿಯ ಕ್ರಿಕೆಟ್‍ಗೆ ಹೇಳಿ ಮಾಡಿಸಿದಂತ ಬ್ಯಾಟ್ಸ್ ಮನ್ ಆಗಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ 99 ರನ್ ಗಳಿಸಿ ಔಟಾದ ಗೇಲ್, ಕ್ಷಣ ಕಾಲ ಹತಾಶೆಗೊಂಡು ಬ್ಯಾಟ್ ಎಸೆದಿದ್ದರು. ಪಂದ್ಯದಲ್ಲಿ 2ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗೇಲ್, 63 ಎಸೆತದಲ್ಲಿ ಆರು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್ ಸಮೇತ ಬರೋಬ್ಬರಿ 99 ರನ್ ಬಾರಿಸಿ ಔಟಾದರು. ನಿಯಮಗಳನ್ನು ಮುರಿದ ಕಾರಣ ಅವರಿಗೆ ದಂಡ ವಿಧಿಸಲಾಗಿದ್ದು, ಸದ್ಯ ತಮ್ಮ ತಪ್ಪನ್ನು ಗೇಲ್ ಒಪ್ಪಿಕೊಂಡಿದ್ದಾರೆ. ಐಪಿಎಲ್ ಕೋಡ್ ಆಫ್ ಕಂಡಕ್ಟ್ ಅಫೆನ್ಸ್ 2.2 ಲೆವೆಲ್ 1 ರ ಅನ್ವಯ ಪಂದ್ಯದ ರೆಫರಿ ದಂಡ ವಿಧಿಸಿದ್ದಾರೆ.

Chris Gayle Fine 1

ಪಂದ್ಯದಲ್ಲಿ 8 ಸಿಕ್ಸರ್ ಸಿಡಿಸುವುದರೊಂದಿಗೆ ಟಿ20 ಮಾದರಿ ಕ್ರಿಕೆಟ್‍ನಲ್ಲಿ ಸಾವಿರ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ ಗೇಲ್, ಐಪಿಎಲ್ ಆವೃತ್ತಿಯಲ್ಲಿ ಶತಕ ಗಳಿಸುವ ಅವಕಾಶದಿಂದ ವಂಚಿತರಾಗಿದ್ದರು. ಜೋಫ್ರಾ ಅರ್ಚರ್ ಎಸೆದ ಯಾರ್ಕರ್ ರನ್ನು ಎದುರಿಸಲು ಗೇಲ್ ವಿಫಲರಾಗಿದ್ದ ಗೇಲ್ 99 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದರೊಂದಿಗೆ ಐಪಿಎಲ್‍ನಲ್ಲಿ 99 ರನ್ ಗಳಿಗೆ 2ನೇ ಬಾರಿಗೆ ಔಟಾದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೇಲ್ 99 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

gayle 1

ಪಂದ್ಯದ ಬಳಿಕ ಮಾತನಾಡಿದ್ದ ಗೇಲ್, ಇಂದು ನಮ್ಮ ಆಟಗಾರರಿಗೆ ಶತಕ ಸಾಧನೆ ಮಾಡುವುದಾಗಿ ಮಾತು ಕೊಟ್ಟಿದ್ದೆ. ಆದರೆ ಅದು ಸದ್ಯವಾಗಿರಲಿಲ್ಲ. ಆದರೆ ನನ್ನ ಮನಸ್ಸಿಗೆ ಮಾತ್ರ ಇದು ಶತಕವೇ ಎಂದು ನಕ್ಕು ಸುಮ್ಮನಾಗಿದ್ದರು. 99 ರನ್ ಗಳಲ್ಲಿ ಔಟಾಗುವುದು ದುರಾದೃಷ್ಟಕರ. ಆದರೆ ನಾನು ಆಟವನ್ನು ಸಂತಸದಿಂದ ಆಡಿದ್ದೇನೆ. ಯುವ ಆಟಗಾರರೊಂದಿಗೆ ಬ್ಯಾಟಿಂಗ್ ಮಾಡುವುದು ಹೆಚ್ಚು ಸಂತಸ ನೀಡುತ್ತದೆ. ಅಂತೆಯೇ ಐಪಿಎಲ್ ಟ್ರೋಫಿ ಗೆದ್ದರೆ ಚೆನ್ನಾಗಿರುತ್ತೆ ಎಂದಿದ್ದಾರೆ.

Chris Gayle Bat 1

ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಟಿ-20 ಪಂದ್ಯ, ಐಪಿಎಲ್ ಮತ್ತು ಬಿಗ್ ಬ್ಯಾಷ್ ಸೇರಿದಂತೆ ಗೇಲ್ ಹಲವಾರು ಟಿ-20 ಟೂರ್ನಿಗಳನ್ನು ಆಡಿದ್ದಾರೆ. ಈ ಎಲ್ಲ ಪಂದ್ಯಗಳಿಂದ ಕೇವಲ ಟಿ-20 ಪಂದ್ಯಗಳಲ್ಲೇ 10 ಸಾವಿರ ರನ್ ಸಿಡಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ 349 ಸಿಕ್ಸ್ ಮತ್ತು 4,760 ರನ್ ಬಾರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *