ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ, ಗೆಲ್ಲೋದು ತುಂಬಾ ಇದೆ: ಗಂಭೀರ್

Public TV
2 Min Read
Gautam Gambhir Virat Kohli

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ. ಆತ ಸಾಧಿಸುವುದು ಇನ್ನೂ ತುಂಬಾ ಇದೆ ಎಂದು ಭಾರತ ತಂಡದ ಮಾಜಿ ಆಟಗಾರ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗಂಭೀರ್, ಕೇವಲ ವೈಯಕ್ತಿಕವಾಗಿ ಉತ್ತಮವಾಗಿ ಆಡುವುದರಿಂದ ಟೀಮ್ ಅನ್ನು ಗೆಲ್ಲಿಸಲು ಆಗುವುದಿಲ್ಲ. ನಾಯಕ ವೈಯಕ್ತಿಕ ಆಟದ ಜೊತೆಗೆ ತಂಡದ ಸದಸ್ಯರನ್ನು ಹುರಿದುಂಬಿಸಬೇಕು ಎಂದು ಕೊಹ್ಲಿ ಅವವರಿಗೆ ಸಲಹೆ ನೀಡಿದ್ದಾರೆ.

gautam Gambhir

ಕ್ರಿಕೆಟ್ ಒಂದು ಟೀಮ್ ಸೇರಿ ಆಡಬೇಕಾದ ಕ್ರೀಡೆ. ನೀವು ವೈಯಕ್ತಿಕವಾಗಿಯೂ ಸ್ಕೋರ್ ಮಾಡಬೇಕು. ಆದರ ಜೊತೆ ತಂಡವನ್ನು ದೊಡ್ಡ ದೊಡ್ಡ ಟೂರ್ನಿಯಲ್ಲಿ ಗೆಲ್ಲಿಸಬೇಕು. ವೆಸ್ಟ್ ಇಂಡೀಸ್ ಬ್ರಿಯಾನ್ ಲಾರಾ, ಸೌತ್ ಆಫ್ರಿಕಾದ ಜಾಕ್ ಕಾಲಿಸ್ ಬಹಳ ರನ್ ಹೊಡೆದರು. ಆದರೆ ಅವರು ಟ್ರೋಫಿ ಗೆಲ್ಲಲಿಲ್ಲ. ಹಾಗೆಯೇ ಕೊಹ್ಲಿ ಕೂಡ ನಾಯಕನಾಗಿ ಏನನ್ನೂ ಗೆದ್ದಿಲ್ಲ. ಇನ್ನೂ ಸಾಧಿಸಬೇಕಿರುವುದು ತುಂಬಾ ಇದೆ ಎಂದು ಹೇಳಿದ್ದಾರೆ.

virat kohli test match batting

ನೀವು ಎಷ್ಟೇ ದೊಡ್ಡ ಮಟ್ಟದ ರನ್ ಹೊಳೆಯನ್ನೇ ಹರಿಸಿ, ಆದರೆ ನನ್ನ ಪ್ರಕಾರ ದೊಡ್ಡ ಟ್ರೋಫಿಯನ್ನು ಗೆಲ್ಲದೇ ಇದ್ದರೆ, ನಿಮ್ಮ ಕ್ರೀಡಾ ಜೀವನ ಪೂರ್ಣಗೊಳ್ಳಲ್ಲ. ಹಾಗಾಗಿ ಕೊಹ್ಲಿ ತಮ್ಮ ತಂಡವನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗಬೇಕು. ಬೇರೆ ಆಟಗಾರರನ್ನು ಇವರಿಗೆ ಹೋಲಿಸಬಾರದು. ಎಲ್ಲ ಆಟಗಾರರಿಗೂ ಅವರದ್ದೇ ಆದ ಸ್ಕಿಲ್ ಇರುತ್ತದೆ. ಈ ನಿಟ್ಟಿನಲ್ಲಿ ಕೊಹ್ಲಿ ತಂಡದ ಆಟಗಾರರನ್ನು ಹುರಿದುಂಬಿಸಿ ಆಡಬೇಕು ಎಂದು ಗೌತಮ್ ತಿಳಿಸಿದ್ದಾರೆ.

Kohli Gambhir

ತಂಡದಲ್ಲಿರುವ ಯುವ ಆಟಗಾರರನ್ನು ಕೊಹ್ಲಿ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ದೊಡ್ಡ ದೊಡ್ಡ ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ತಂಡವನ್ನು ಸರಿಯಾಗಿ ನಿರ್ವಹಣೆ ಮಾಡುವುದರಲ್ಲಿ ಎಡವಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಎಂಎಸ್ ಧೋನಿ ನಂತರ ಕೊಹ್ಲಿ 2017ರಲ್ಲಿ ಭಾರತದ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು 2019ರ ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸಿದರು. ಆದರೆ ತಂಡ ಟ್ರೋಫಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ನಾಕೌಟ್ ಹಂತದಲ್ಲಿ ಟೂರ್ನಿಯಿಂದ ಔಟ್ ಆಗಿತ್ತು.

Virat Dhoni

ಭಾರತದ ರನ್ ಮಷಿನ್ ಎಂದೇ ಖ್ಯಾತಿಯಾಗಿರುವ ಕೊಹ್ಲಿ ವೈಯಕ್ತಿಕವಾಗಿ ಉತ್ತಮವಾಗಿ ಆಡುತ್ತಿದ್ದಾರೆ. ಟಿ-20 ಮಾದರಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಜೊತೆಗೆ ಏಕದಿನ ಮಾದರಿಯಲ್ಲಿ ಈಗಾಗಲೇ ಒಟ್ಟು 11,867 ರನ್ ಸಿಡಿಸಿರುವ ಕೊಹ್ಲಿ, 205 ಪಂದ್ಯಗಳಲ್ಲೇ 10,000 ರನ್ ಪೂರೈಸಿ 2018ರಲ್ಲಿ ಅತೀ ಬೇಗ 10 ಸಾವಿರ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದರು. ಜೊತೆಗೆ ಟೆಸ್ಟ್ ಮಾದರಿಯಲ್ಲಿ ಐಸಿಸಿ ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಆದರೆ ನಾಯಕನಾಗಿ ಇಲ್ಲಿಯವರೆಗೂ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *