– ಯಾದಗಿರಿ ಪ್ರವಾಹದ ಮೊದಲ ಪರಿಣಾಮ
ಯಾದಗಿರಿ: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ರೌದ್ರ ನರ್ತನ ತೋರುತ್ತಿದ್ದು, ಬಹುತೇಕ ಸೇತುವೆಗಳು ಮುಳುಗಡೆಯಾಗಿವೆ. ಇದರಿಂದಾಗಿ ಜಿಲ್ಲೆಗಳಿಂದ ಮತ್ತೊಂದು ಜಿಲ್ಲಗೆ ಸಂಪರ್ಕ ಕಡಿತವಾಗಿದೆ.
ಜಿಲ್ಲೆಯ ಕೊಳ್ಳೂರು ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಇದರಿಂದಾಗಿ ಯಾದಗಿರಿ ಮತ್ತು ರಾಯಚೂರು ಸಂಪರ್ಕ ಕಡಿತವಾಗಿದೆ. ಯಾದಗಿರಿ-ರಾಯಚೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಈ ರಸ್ತೆಯ ಸೇತುವೆಯೇ ಮುಳುಗಡೆಯಾಗಿದೆ. ಇದರಿಂದಾಗಿ ಸಾಕಷ್ಟು ಗ್ರಾಮಗಳ ಹಾಗೂ ಯಾದಗಿರಿ-ರಾಯಚೂರಿನ ಸಂಪರ್ಕ ಕಡಿತವಾಗಿದೆ. ಸೇತುವೆ ಮುಳುಗಡೆಯಾಗಿರುವುದು ಕೊಳ್ಳೂರು ಕ್ರಾಸ್ ಬಳಿಯೇ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದಾರೆ.
ಬಸವಸಾಗರ ಜಲಾಶಯದಿಂದ ಬರೊಬ್ಬರಿ 2.60 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಸೇತುವೆಗಳು ಮುಳುಗಡೆಯಾಗಿ ಹಲವು ಗ್ರಾಮಗಳ ಹಾಗೂ ನಗರಗಳ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಭಾರೀ ಪ್ರಮಾಣದಲ್ಲಿ ಹೊಲಗಳಿಗೂ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ಕೃಷ್ಣ ನದಿಯ ಆರ್ಭಟಕ್ಕೆ ಬೆಳೆ ಕೊಚ್ಚಿ ಹೋಗಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಈಗ ಕೃಷ್ಣೆಯ ಪಾಲಾಗಿದೆ. ಹೊಲ ಗದ್ದೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.