ಕೊಪ್ಪಳ: ಒಂದೇಡೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ನಿರಾಳವಾಗುತ್ತಿದ್ದರು. ಆದರೆ ಇಲ್ಲೊಂದು ಜಿಲ್ಲೆಯಲ್ಲಿ ಇಲಿ ಜ್ವರ ಆರಂಭವಾಗಿದ್ದು, ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಹೌದು. ಕೊಪ್ಪಳ ಜಿಲ್ಲೆಯಲ್ಲಿ ಇಲಿ ಜ್ವರದ್ದೇ ಮಾತಾಗಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 6 ಜನರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿ ಮುಖವಾಗುತ್ತಿರುವುದು ನೆಮ್ಮದಿ ತಂದಿರುವ ಮಧ್ಯೆಯೇ ಇದೀಗ ಕೆಲವು ದಿನಗಳಿಂದ ಇಲಿಜ್ವರಕ್ಕೆ ಸಂಬಂಧಿಸಿದ 6 ಪ್ರಕರಣಗಳು ಪತ್ತೆಯಾಗಿದ್ದು, ಜನತೆಯಲ್ಲಿ ತಲ್ಲಣವನ್ನುಂಟು ಮೂಡಿಸಿದೆ.
Advertisement
Advertisement
ಕೊಪ್ಪಳ ತಾಲೂಕಿನ ಹೊಸಳ್ಳಿ, ಬಹದ್ದೂರಬಂಡಿ, ಕೆರೆಹಳ್ಳಿ, ಹೊಸಲಿಂಗಾಪುರ, ನರೇಗಲ್ ಹಾಗೂ ಕುಷ್ಟಗಿ ತಾಲೂಕಿನ ಶಾಖಾಪುರ, ಗ್ರಾಮದಲ್ಲಿ ತಲಾ ಒಬ್ಬರಲ್ಲಿ ಇಲಿ ಜ್ವರ ಇರುವುದು ಪರೀಕ್ಷೆ ಮೂಲಕ ಖಚಿತವಾಗಿದೆ. ಇದರಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇಲಿ ಜ್ವರ ನಿಯಂತ್ರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Advertisement
Advertisement
ಈ ಇಲಿ ಜ್ವರ ಹರಡಲು ಸ್ಟ್ರೈರೋ ಕೀಟ ಎಂಬ ಸೂಕ್ಷ್ಮಾಣು ಜೀವಿ ಕಾರಣವಾಗಿದ್ದು, ಸಾಂಕ್ರಾಮಿಕ ರೋಗ ಸೋಂಕು ಹೊಂದಿರುವ ಇಲಿ, ಹೆಗ್ಗಣ, ಬೆಕ್ಕು, ನಾಯಿ ಹಾಗೂ ಇತರ ಕಾಡು ಪ್ರಾಣಿಗಳ ಮೂತ್ರ ವಿಸರ್ಜನೆಯಿಂದ ರೋಗಾಣು ನೀರಿನಲ್ಲಿ ಸೇರಿಕೊಳ್ಳುತ್ತದೆ. ಜೊತೆಗೆ ಚರಂಡಿ ಶುದ್ಧ ಇರದಿರುವುದು ಹಾಗೂ ಮೂತ್ರ ವಿಸರ್ಜನೆಯಂತಹ ನೀರು ಮನುಷ್ಯನ ದೇಹ ಸೇರಿದರೆ ಅಥವಾ ಗಾಯ ಅಥವಾ ಬಾಯಿ, ಮೂಗು, ಕಣ್ಣುಗಳ ಒಳಭಾಗದ ಮೂಲಕ ವೈರಸ್ ಕನಗಳು ದೇಹ ಸೇರಿ ಇಲಿ ಜ್ವರ ಬರುತ್ತದೆ. ಹೀಗಾಗಿ ಜನರು ಜಾಗೃತರಾಗಿರಬೇಕು. ಆದರೆ ಭಯ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲೆಯಲ್ಲಿ ಇಲಿ ಜ್ವರ ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ಹೋಯಿತೆಂದು ನೆಮ್ಮದಿಯಿಂದ ಇರುವ ಮೊದಲೇ ಇಲಿ ಜ್ವರ ಕಾಣಿಸಿಕೊಂಡಿರುವುದು ಜನರ ನೆಮ್ಮದಿಯನ್ನೇ ಕಸಿದುಕೊಂಡಿದೆ. ಒಟ್ಟಿನಲ್ಲಿ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಇಲಿಜ್ವರದಿಂದ ದೂರ ಇರಬೇಕಿದೆ.