ಕೊರೊನಾ ರಣಕೇಕೆಗೆ ಹೆದರದ ಜನ- 1 ಸಾವಿರ ಮಾಸ್ಕ್ ದಂಡಕ್ಕೂ ಡೋಂಟ್ ಕೇರ್!

Public TV
4 Min Read
MASK FINE

– ಮಾರ್ಷಲ್‍ಗಳ ಜೊತೆ ವಿತಂಡವಾದ, ತರಹೇವಾರಿ ಪ್ರಶ್ನೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ದಿನೇ ದಿನೇ ಡಬಲ್ ಆಗುತ್ತಲೇ ಇದೆ. ಇದನ್ನ ಕಂಟ್ರೋಲ್ ಮಾಡಬೇಕು ಅಂತ ಜನರ ಹಿತದೃಷ್ಟಿಯಿಂದ ಸರ್ಕಾರ, ಕಠಿಣ ಮಾಸ್ಕ್ ರೂಲ್ಸ್ ಜಾರಿಗೆ ತಂದಿದೆ. ಆದರೆ ಇದಕ್ಕೆ ಜನರು ಸಹಕರಿಸ್ತಲೇ ಇಲ್ಲ. ಮಾಸ್ಕ್ ಹಾಕ್ತಿಲ್ಲ, ದಂಡನೂ ಕಟ್ತಿಲ್ಲ. ಬದಲಿಗೆ ಮಾರ್ಷಲ್‍ಗಳ ಜೊತೆ ವಿತಂಡವಾದ ಮಾಡುತ್ತಿದ್ದಾರೆ.

MASK 8

ಮಾಸ್ಕ್ ಹೆಸರಲ್ಲಿ ಲೂಟಿ ಹೊಡೀತಿದ್ದೀರಾ..? ಮಾಸ್ಕ್ ಹಾಕದ ದೊಡ್ಡ ವ್ಯಕ್ತಿಗಳಿಗೆ ದಂಡ ಹಾಕ್ತೀರಾ..? ಕೆಲಸ ಇಲ್ಲ, ಎಲ್ಲಿಂದ ದುಡ್ಡು ತರೋದು, ಕಾರಲ್ಲಿದ್ರೆ ಯಾಕ್ರಿ ಮಾಸ್ಕ್ ಹಾಕಬೇಕು. ಕೊರೊನಾ ರಾಜ್ಯದಲ್ಲಿ ಪ್ರತಿನಿತ್ಯ 10 ಸಾವಿರ ಗಡಿ ದಾಟಿ ಆರ್ಭಟಿಸ್ತಿದೆ. ನೂರಾರು ಜನರನ್ನ ಬಲಿ ಪಡೆದುಕೊಳ್ತಿದ್ರೆ. ಇದರ ಗಂಭೀರತೆ ಅರಿತ ಸರ್ಕಾರವೇ ಎಚ್ಚೆತ್ತು ಮಾಸ್ಕ್ ಹಾಕಿ, ಅಂತರ ಕಾಯ್ದುಕೊಳ್ಳಿ ಅಂತ ಬುದ್ಧಿ ಹೇಳ್ತಿದೆ. ಆದರೂ ಕೆಲ ಜನರದ್ದು ಬರೀ ಇದೇ ವಿತಂಡವಾದ. ಹೀಗಾಗಿ ಮಾಸ್ಕ್ ಹಾಕದವರಿಗೆ ಸರ್ಕಾರ 1 ಸಾವಿರ ರೂಪಾಯಿ ದಂಡವನ್ನ ವಿಧಿಸ್ತಿದೆ. ಜನರು ಇದ್ಯಾವುದಕ್ಕೂ ಬೆದರದೇ ಡೋಂಟ್‍ಕೇರ್ ಅಂತಿದ್ದಾರೆ.

MASK

ಪಬ್ಲಿಕ್ ಟಿವಿ ನಿತ್ಯ ಮಾಸ್ಕ್-ದಂಡದ ರಿಯಾಲಿಟಿ ಚೆಕ್ ಮಾಡ್ತಿದೆ. ಈ ವೇಳೆ, ಸಿಕ್ಕಾಪಟ್ಟೆ ಜನ ಮಾಸ್ಕ್ ಹಾಕಿಕೊಳ್ಳದೇ ಸಿಕ್ಕಾಕ್ಕೊಂಡ್ರು. ಅಲ್ಲದೆ ಕ್ಯಾಮೆರಾ ನೋಡಿ ಮಾಸ್ಕ್ ಎಳೆದುಕೊಂಡ್ರು. ಇನ್ನು ಮಾರ್ಷಲ್ಸ್ ಗಳ ಕಾರ್ಯವೈಖರಿ ಬಗ್ಗೆ ಚೆಕ್ ಮಾಡಿದಾಗ ವಿಚಿತ್ರ ದೃಶ್ಯಗಳು ನಮಗೆ ಕಾಣಿಸಿದವು.

MASK 7

ಕಾರಲ್ಲೂ ಮಾಸ್ಕ್ ಹಾಕ್ಬೇಕಾ..?:
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಾರಿನಲ್ಲಿ ಹೋಗ್ತಿದ್ದ ವ್ಯಕ್ತಿ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಪ್ರಶ್ನಿಸಿದ ಮಾರ್ಷಲ್ ಜೊತೆ ವಾಗ್ವಾದಕ್ಕಿಳಿದ್ರು. ದಂಡ ಹಾಕಿದ್ರೆ ಕೊರೊನಾ ಹೋಗುತ್ತಾ..? ದೊಡ್ಡವರು ಮಾಸ್ಕ್ ಹಾಕಲ್ಲ. ಅವರನ್ನು ಹೋಗಿ ಕೇಳ್ತೀರಾ..? ಕಾರಲ್ಲಿ ಕೂತಿದ್ದೀನಿ ಯಾಕೆ ಮಾಸ್ಕ್ ಹಾಕಬೇಕು? ಎಷ್ಟು ಲಕ್ಷ ದುಡ್ಡು ಮಾಡಿದ್ದೀರಾ? ಅಂತ ಆವಾಜ್ ಹಾಕಿದ. ಪೊಲೀಸರು ಬಂದ್ಮೇಲೆ ವರಸೆ ಬದಲಿಸಿದ.

MASK 6

ಸಿಎಂ ಬಳಿಯೇ ಫೈನ್ ಕಟ್ತೀನಿ:
ಬಸವೇಶ್ವರ ನಗರದಲ್ಲಿ ಮಾರ್ಷಲ್ ಗಳ ಜೊತೆ ಜನ ವಾದಕ್ಕಿಳಿದ್ರು. ನಾನ್ಯಾಕೆ ಫೈನ್ ಕಟ್ಟಲಿ, ಯಡಿಯೂರಪ್ಪ ಹತ್ರನೇ ಕರೆದುಕೊಂಡು ಹೋಗಿ, ಅಲ್ಲೇ ಕಟ್ತೀನಿ ಅಂತ ದಬಾಯಿಸಿದ್ರು. ಜನರಿಗೆ ಕೆಲಸ ಇಲ್ಲ, ಕಾರ್ಯ ಇಲ್ಲ ಎಲ್ಲಿಂದ ಫೈನ್ ಕಟ್ಟೋದು. ಕಮಿಷನರ್ ಮಂಜುನಾಥ್ ಪ್ರಸಾದ್ ಹತ್ತಿರನೇ ಕರ್ಕೊಂಡು ಹೋಗಿ. ವಿಧಾನಸೌಧದಲ್ಲಿ ಸಿದ್ದರಾಮಯ್ಯನವರು ಮಾಸ್ಕ್ ತೆಗೆದು ಮಾತನಾಡುತ್ತಿದ್ರು
ಅವರಿಗೆ ಯಾಕೆ ನೀವು ಫೈನ್ ಹಾಕಲ್ಲ. ನಮಗೆ ದಂಡ ಅಂತೀರಾ ಅಂತ ಬಸವೇಶ್ವರ ನಗರದ ಹೊಟೇಲ್ ಒಂದರಲ್ಲಿ ವ್ಯಕ್ತಿ ಮೊಂಡಾಟ ಮಾಡಿದ್ರು.

MASK 5

ದುಡ್ಡಿಲ್ಲ, ಬ್ಯಾಗ್ ತಗೊಳ್ಳಿ:
ಮಾಸ್ಕ್ ತೆಗೆದು ಫೋನ್‍ನಲ್ಲಿ ಮಾತಾಡ್ತಿದ್ದ ಯುವತಿ ಆಟೋದಲ್ಲಿ ಸಿಕ್ಕಿ ಬಿದ್ದಳು. ದಂಡ ಕಟ್ಟಮ್ಮ ಅಂತಂದ್ರೇ ಮಾರ್ಷಲ್‍ಗೆ ಕಥೆ ಕಟ್ಟಿದಳು. ಫೋನ್‍ನಲ್ಲಿ ಮಾತಾಡೋಕೆ ಮಾಸ್ಕ್ ತೆಗೆದೆ. ದಂಡ ಕಟ್ಟೋಕೆ ದುಡ್ಡಿಲ್ಲ. ನೀವೇ ಬ್ಯಾಗ್ ತಗೊಳ್ಳಿ ಸರ್ ನೋಡ್ಕೊಳ್ಳಿ ಅಂತ ಹೈಡ್ರಾಮಾ ಮಾಡಿದ ಪ್ರಸಂಗವೂ ನಡೆದಿದೆ.

MASK 9

ಠಾಣೆಗೆ ಹೋದ್ರೂ ದಂಡ ಕಟ್ಲಿಲ್ಲ:
ವ್ಯಕ್ತಿಯೊಬ್ಬರು ಮಾಸ್ಕ್ ಇಲ್ಲದೆ ಬೈಕ್‍ನಲ್ಲಿ ಓಡಾಡ್ತಿದ್ರು. ಮಾರ್ಷಲ್‍ಗಳು ಸಾವಿರ ರೂಪಾಯಿ ದಂಡ ಹಾಕಿದ್ರೆ ಕಟ್ಟಲಿಲ್ಲ. ನನ್ನತ್ರ ದುಡ್ಡಿಲ್ಲ. ನಾನೇಗೆ ಕಟ್ಟಲಿ ಅಂದ್ರು. ನಡೀ ಸ್ಟೇಷನ್‍ಗೆ ಅಂತ ಕರ್ಕೊಂಡು ಹೋದರೂ ನೋ.. ಯೂಸ್.. ಕೊನೆಗೆ ಪೊಲೀಸರೇ.. ನೋಡಪ್ಪ, ಇದು ಲಾಸ್ಟ್ ವಾರ್ನಿಂಗ್, ಇನ್ಮೇಲೆ ಮಾಸ್ಕ್ ಹಾಕದೆ ಹೊರಗೆ ಬಂದ್ರೆ ಕಂಬಿ ಹಿಂದೆ ಹಾಕ್ತೀವಿ ಅಂತ ಹೇಳಿ ಕಳಿಸಿದ್ರು.

MASK 4

ಮಾಸ್ಕ್ ಕೊಳ್ಳೋಕೆ ದುಡ್ಡಿಲ್ಲ:
ಮೆಜೆಸ್ಟಿಕ್ ಬಳಿ ಯುವಕನೋರ್ವ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಪ್ರಶ್ನಿಸಿದ ಮಾರ್ಷಲ್‍ಗೆ, ನಾನು ಹೈದ್ರಾಬಾದ್‍ನಿಂದ ಬಂದಿದ್ದೀನಿ ಸರ್, ಮಾಸ್ಕ್ ಎಲ್ಲೋ ಬಿದ್ದಿದೆ. ಮಾಸ್ಕ್ ತಗೋಳೋಕೆ ನನ್ನ ಜೇಬಲ್ಲಿ ದುಡ್ಡಿಲ್ಲ ಅಂತ ಹೇಳ್ದ. ಅದಕ್ಕೆ ಮಾರ್ಷಲ್‍ಗಳೇ ಸರಿ ಆಯ್ತು ಅಂತ ಯುವಕನಿಗೆ ಮಾಸ್ಕ್ ಖರೀದಿ ಮಾಡಿ ಕೊಡಿಸಿದ್ದಾರೆ. ಇದರ ಮಧ್ಯೆ ಮಾಸ್ಕ್ ಹಾಕದವರಿಗೆ ಮಾರ್ಷಲ್‍ಗಳು ಪಾಠವನ್ನು ಮಾಡಿದ್ರು. ಮತ್ತೊಮ್ಮೆ ಈ ರೀತಿ ಮಾಡಲ್ಲ. ಮಾಸ್ಕ್ ಹಾಕುವುದನ್ನು ಮರೆಯಲ್ಲ ಎಂದು ಅವರಿಂದ ಹೇಳಿದ ಘಟನೆಯೂ ಮೆಜೆಸ್ಟಿಕ್ ಬಳಿ ನಡೀತು.

MASK 3

 

ಸುಮ್ನೆ ಬಿಟ್ರೆ ಸರಿ ಈಗ:
ಮಂಜುನಾಥ ನಗರದಲ್ಲಿ, ಮಾಸ್ಕ್ ಧರಿಸಿದ ಬೈಕ್ ಸವಾರನಿಗೆ ದಂಡ ಹಾಕಲು ಮಾರ್ಷಲ್‍ಗಳು ಮುಂದಾದಾಗ ಕಿರಿಕ್ ತೆಗೆದಿದ್ದಾನೆ. ಬಿಬಿಎಂಪಿ ಕಮಿಷನರ್ ಆರ್ಡರ್ ಕಾಪಿ ನನ್ನತ್ರನೂ ಇದೆ. ಸುಮ್ನೆ ನನ್ನ ಬಿಟ್ಟು ಬಿಡಿ ಅಂತ ಅವಾಜ್ ಹಾಕಿದ್ದಾನೆ.

ಬೆಂಗಳೂರು ಮಾತ್ರವಲ್ಲ, ರಾಜ್ಯದ ಜಿಲ್ಲೆಗಳಲ್ಲೂ ಮಾಸ್ಕ್ ರೂಲ್ಸ್ ಅನ್ನು ಜನರು ಪಾಲಿಸುತ್ತಿಲ್ಲ. ಸಾವಿರ ರೂಪಾಯಿ ದಂಡಕ್ಕೂ ಹೆದರದ ಜನರು ಜೇಬಿನಲ್ಲಿ, ಸೊಂಟದಲ್ಲಿ ಮಾಸ್ಕ್ ಸಿಕ್ಕಿಸಿಕೊಂಡು ಓಡಾಡುತ್ತಿದ್ರು. ಕಾಫಿ ಕುಡಿಯೋಕೆ ತೆಗೆದಿದ್ದೆ, ನೀರು ಕುಡಿಬೇಕಿತ್ತು ಎಂಬ ಕುಂಟುನೆಪಗಳನ್ನು ಹೇಳಿದ್ರು. ಕೊರೊನಾಗೆ ಮದ್ದಾಗಿರುವ ಮಾಸ್ಕ್ ಅನ್ನು ಜನರು ನಿರ್ಲಕ್ಷಿಸುತ್ತಿದ್ದಾರೆ. ಬೀದರ್‍ನಲ್ಲಿ ಮಾರ್ಷಲ್‍ಗಳ ಜೊತೆ ಕಿರಿಕ್ ಮಾಡ್ಕೊಂಡ್ರೆ. ಕಾರು ಚಾಲಕನೊಬ್ಬ ಹ್ಯಾಂಡ್ ಟವಲ್ ತೋರಿಸಿ, ಇದು ಮಾಸ್ಕ್ ರೀತಿ ಇಲ್ವಾ..? ಕರ್ಚೀಫ್ ಕಟ್ಟಿಕೊಂಡರೆ ಆಗಲ್ವಾ..? ನೀವು ಯಾಕೆ ಎನ್ 95 ಮಾಸ್ಕ್ ಹಾಕಿಲ್ಲ ಅಂತ ಮರುಪ್ರಶ್ನಿಸಿ ವಾಗ್ವಾದಕ್ಕಿಳಿದ್ರು.

MASK 1

ಹಣ್ಣಿನ ವ್ಯಾಪಾರಿಯೊಬ್ಬ ಕ್ಯಾಮೆರಾ ಕಂಡು ತಕ್ಕಡಿಯ ಪಾತ್ರೆಯನ್ನೇ ಮುಖಕ್ಕೆ ಮುಚ್ಚಿಕೊಂಡ. ಗದಗದ ಮಾರ್ಕೆಟ್‍ನಲ್ಲೂ ಇಂಥಾದ್ದೇ ದೃಶ್ಯ ಕಂಡು ಬಂತು. ಕಲಬುರಗಿ, ಬಾಗಲಕೋಟೆ, ವಿಜಯಪುರದ ಬಸ್ ಸ್ಟಾಪ್, ಕೋಳಿ ಮಾರ್ಕೆಟ್‍ನಲ್ಲಂತೂ ಮಾಸ್ಕ್ ಮಾಯವೇ ಆಗಿತ್ತು. ಬಳ್ಳಾರಿಯ ಮಾರ್ಕೆಟ್, ದಾವಣಗೆರೆಯ ಮಾರ್ಕೆಟ್‍ಗಳಲ್ಲೇ ಮಾಸ್ಕ್ ಅಂದ್ರೇನು ಎಂದು ಹುಡುಕಬೇಕಿತ್ತು.

MASK 2

ಧಾರವಾಡದಲ್ಲಿ ಮಾಸ್ಕ್‍ಗಳನ್ನು ಜೇಬಿನಲ್ಲಿಟ್ಟುಕೊಂಡು ಓಡಾಡಿದ್ರೆ. ಹಾಸನ, ಹಾವೇರಿ, ಕೊಪ್ಪಳದಲ್ಲಂತೂ ಕೇಳುವಂತೆಯೇ ಇಲ್ಲ. ರಾಯಚೂರಿನ ಮಟನ್ ಮಾರ್ಕೆಟ್, ಮಾರ್ಕೆಟ್‍ನಲ್ಲಿ ಜನರು ಅಂತರವೂ ಇಲ್ಲ. ಮಾಸ್ಕೂ ಧರಿಸಿರಲಿಲ್ಲ. ಮಂಗಳೂರು, ಮೈಸೂರು, ತುಮಕೂರಿನಲ್ಲೂ ಇದೇ ಪರಿಸ್ಥಿತಿ ಕಂಡು ಬಂತು. ನೋಡಿದ್ರಲ್ಲಾ ಮಾಸ್ಕ್ ದಂಡಕ್ಕೆ ಜನ ಹೇಗೆ ರೆಸ್ಪಾಂಡ್ ಮಾಡ್ತಿದ್ದಾರೆ ಅಂತ. ಕೊರೊನಾ ಸೋಂಕಿತರು ಲಕ್ಷಾಂತರ ರೂಪಾಯಿ ಬಿಲ್ ಕಟ್ಟಿ ಬರ್ತಿದ್ದಾರೆ. ಆದರೂ, ಈ ಜನರಿಗೆ ಕೊರೊನಾ ಸೋಂಕಿನ ತೀವ್ರತೆ ಗೊತ್ತಾಗಿಲ್ಲ. ಅದಕ್ಕೆ ಬೇಕಾಬಿಟ್ಟಿ ವಿತಂಡ ವಾದ ಮಾಡ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *