ಕೊರೊನಾ 3ನೇ ಅಲೆ ಎದುರಿಸಲು ಕೇಂದ್ರದಿಂದ ರಾಜ್ಯಕ್ಕೆ 1,500 ಕೋಟಿ: ಸಚಿವ ಸುಧಾಕರ್

Public TV
2 Min Read
K Sudhakar

ಬೆಂಗಳೂರು: ದೇಶದಲ್ಲಿ ಸಂಭವನೀಯ ಮೂರನೇ ಅಲೆಯ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1,500 ಕೋಟಿ ರೂಪಾಯಿಗಳ ನೆರವು ದೊರೆತಿದೆ. ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಮೂರನೇ ಅಲೆಯ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸುಧಾಕರ್ ಹೇಳಿದರು.

ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಯುನೈಟೆಡ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕಾ ವಿತರಣೆಯ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು. ಯುವ ವೈದ್ಯರ ತಂಡ ಕಲಬುರಗಿಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ಬೆಂಗಳೂರಿನಲ್ಲೂ ಆಸ್ಪತ್ರೆಯನ್ನು ಪ್ರಾರಂಭಿಸಿರುವುದು ಬಹಳ ಸಂತಸದ ವಿಷಯ. ಕೊರೊನಾ ಸಾಂಕ್ರಾಮಿಕ ಹೆಚ್ಚಾಗಿದ್ದಾಗ ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಉಂಟಾಗಿತ್ತು. ಆ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ನೀಡಿದ ಸಹಕಾರ ಬಹಳ ಶ್ಲಾಘನೀಯ. ಕಲಬುರಗಿ ಜಿಲ್ಲಾ ಕೇಂದ್ರದಲ್ಲಿ ಯುನೈಟೆಡ್ ಆಸ್ಪತ್ರೆ ಸಾವಿರಾರು ಕೊರೊನಾ ಪೀಡಿತರಿಗೆ ಉತ್ತಮ ಚಿಕಿತ್ಸೆ ನೀಡಿದೆ. ರಾಜ್ಯ ಸರ್ಕಾರ ದೇಶದಲ್ಲೇ ರಾಜ್ಯವನ್ನು ಆರೋಗ್ಯ ಕ್ಷೇತ್ರದಲ್ಲಿ ಮಾದರಿ ರಾಜ್ಯವನ್ನಾಗಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಈ ವಿಷಯದಲ್ಲಿ ಸಫಲತೆಯನ್ನು ಪಡೆಯಲು ಖಾಸಗಿ ಆಸ್ಪತ್ರೆಗಳ ಸಹಕಾರ ಬಹಳ ಅಗತ್ಯ ಎಂದರು.

SUDHAKAR 1 medium

ಕೇಂದ್ರ ಸರ್ಕಾರ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಮುಂದಿನ ಸಂಭವನೀಯ ಮೂರನೇ ಅಲೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ 23 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಈ ಹಣದಲ್ಲಿ ರಾಜ್ಯಕ್ಕೆ 1500 ಕೋಟಿ ರೂಪಾಯಿಗಳ ನೆರವು ದೊರೆಯಲಿದ್ದು, ರಾಜ್ಯದಲ್ಲಿ ಮಕ್ಕಳ ವಿಭಾಗದ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಿಕೊಳ್ಳಲಾಗುವುದು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮೂರನೇ ಅಲೆಗೆ ಅಗತ್ಯವಿರುವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ckb sudhakar medium

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಜಯನಗರ ಭಾಗದಲ್ಲಿ ಮತ್ತೊಂದು ನೂತನ ಆಸ್ಪತ್ರೆ ಪ್ರಾರಂಭವಾಗುತ್ತಿರುವುದು ಬಹಳ ಸಂತಸದ ವಿಷಯ. ಕೊರೊನಾ ಸಂಕಷ್ಟ ಕಾಲದಲ್ಲಿ ಆಸ್ಪತ್ರೆ ಸೌಲಭ್ಯಗಳ ದೊರೆಯದೆ ಇದ್ದಂತಹ ಸಂದರ್ಭದಲ್ಲಿ ಇದರ ಮಹತ್ವವನ್ನು ನಾವು ತಿಳಿದುಕೊಂಡಿದ್ದೇವೆ. ಹೆಲ್ತ್ ಕಾರ್ಡ್ ಗಳ ಮೂಲಕ ಹಾಗೂ ನಿರ್ದಿಷ್ಟ ದರವನ್ನು ನಿಗದಿಪಡಿಸುವ ಮೂಲಕ ಉತ್ತಮ ಸೇವೆಯನ್ನು ನೀಡುವ ಭರವಸೆಯನ್ನು ಇಲ್ಲಿನ ವೈದ್ಯಕೀಯ ಮಂಡಳಿ ನೀಡಿರುವುದು ಸಂತಸದ ವಿಷಯ ಎಂದರು.

SUDHAKAR 1 4 medium

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಮಾತನಾಡಿ, ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಹಾಗೂ ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ಕರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದೆ. ಬೆಂಗಳೂರು ಹೊರತುಪಡಿಸಿ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಿದ ರಾಜ್ಯದ ಮೊದಲ ಖಾಸಗಿ ಆಸ್ಪತ್ರೆ ಎನ್ನುವುದು ಇದರ ಹೆಗ್ಗಳಿಕೆ. ಚಿಕಿತ್ಸೆ ಮೊದಲು ಎನ್ನುವ ಧ್ಯೇಯ ವಾಕ್ಯದ ಮೂಲಕ ಉತ್ತಮ ಚಿಕಿತ್ಸೆಯನ್ನು ಯುನೈಟೆಡ್ ಆಸ್ಪತ್ರೆಯ ತಂಡ ನೀಡಿರುವುದು ಬಹಳ ಸಂತಸದ ವಿಷಯ ಎಂದು ಹೇಳಿದರು.

SUDHAKAR medium

ಕಾರ್ಯಕ್ರಮದಲ್ಲಿ ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಯುನೈಟೆಡ್ ಆಸ್ಪತ್ರೆಯ ಸಿಎಂಡಿ ಡಾ ವಿಕ್ರಮ್ ಸಿದ್ದಾರೆಡ್ಡಿ, ಮಾಜಿ ಕೇಂದ್ರ ಸಚಿವೆ ರಾಣಿ ಸತೀಶ್, ಮಾಜಿ ಸಚಿವೆ ಪಿಜಿಆರ್ ಸಿಂಧ್ಯಾ, ಶಾಸಕ ಪಿ ರಾಜೀವ, ಯುನೈಟೆಡ್ ಆಸ್ಪತ್ರೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ. ಶಾಂತಕುಮಾರ್ ಮುರುಡಾ ಅವರಿಗೆ, ಆಸ್ಪತ್ರೆಯ ನಿರ್ದೇಶಕರಾದ ಡಾ. ವೀಣಾ ವಿಕ್ರಮ್ ಸಿದ್ಧಾರೆಡ್ಡಿ ಹಾಗೂ ಡಾ. ರಾಜೀವ್ ಬಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *