ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ಇವತ್ತಿನಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಿದೆ. ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಸದನವನ್ನು ಮೊಟುಕುಗೊಳಿಸಲು ಸಿಎಂ ಬಿಎಸ್‍ವೈ ಚಿಂತನೆ ನಡೆಸಿದ್ದು, ಆದರೆ ಇದಕ್ಕೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಸಿಎಂ ಯಡಿಯೂರಪ್ಪ ಬೆಳಿಗ್ಗೆ ಸದನ ಮೊಟಕುಗೊಳಿಸುವ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರು. ಕೊರೊನಾ ಜಾಸ್ತಿ ಆಗುತ್ತಿದೆ ನಿಜ, ಆದರೆ ಅದು ನಿಮ್ಮಿಂದ ಜಾಸ್ತಿ ಆಗುತ್ತಿದೆ ಎಂದು ಹೇಳಿದೆ. ನಾವು ಅಧಿವೇಶನ ಮೊಟಕುಗೊಳಿಸಲು ಒಪ್ಪುವುದಿಲ್ಲ. ಇನ್ನೂ ಮೂರು ವಾರಗಳ ಕಾಲ ಅಧಿವೇಶನ ವಿಸ್ತರಿಸಲು ನಮ್ಮ ಪ್ರಸ್ತಾಪವಿದೆ ಎಂದರು.
ಸುಮಾರು 30 ರಿಂದ 40 ಬಿಲ್ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲು ತಂದಿದ್ದಾರೆ. ಸದನ ಮೊಟಕುಗೊಳಿಸುವುದಾದರೇ ಬಿಲ್ ಗಳನ್ನು ವಾಪಸ್ ಪಡೆಯಲಿ ನೋಡೋಣ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಹೇಳುತ್ತೇನೆ ಎಂದರು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಅಧಿವೇಶನ ಕಲಾಪವನ್ನು ಕಡಿತಗೊಳಿಸಬೇಕು ಎಂಬ ಅನಿಸಿಕೆ ಇದೆ. ಈ ಬಗ್ಗೆ ಕಲಾಪ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಇದಕ್ಕೆ ವಿಪಕ್ಷಗಳ ಸಹಕಾರ ಬೇಕಿದೆ ಎಂದರು.