– ಸಮಾಜದ ನಿಂದನೆಗೆ ಗುರಿ ಮಾಡೋದು ಸರಿಯಲ್ಲ
ಬೆಂಗಳೂರು: ಕೊರೊನಾ ಸೋಂಕಿತರನ್ನ ಅಪರಾಧಿಗಳ ರೀತಿ ಕಾಣುವುದು, ಸಮಾಜದ ನಿಂದನೆಗೆ ಗುರಿ ಮಾಡುವುದು ಸರಿಯಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸುಮಲತಾ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಬಗ್ಗೆ ಸ್ವತಃ ಸುಮಲತಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
Advertisement
ಪೋಸ್ಟ್‌ನಲ್ಲಿ ಏನಿದೆ?
“ನಾನು ಕೊರೊನಾದಿಂದ ಗುಣಮುಖ ಆಗಿದ್ದೇನೆ ಎನ್ನುವ ಒಂದು ಸುದ್ದಿ ಹರಿದಾಡುತ್ತಿದೆ. ಆದರೆ ನಾನು ಸಂಪೂರ್ಣವಾಗಿ ಗುಣಮುಖವಾಗಿರುವುದು, ಕ್ವಾರಂಟೈನ್ ಅವಧಿ ಮುಗಿದು, ಪರೀಕ್ಷೆಯ ಬಳಿಕವೇ ತಿಳಿಯುವುದು. ಸದ್ಯಕ್ಕೆ ಔಷಧಿ ಹಾಗೂ ಸುಶ್ರುಷೆ ಮುಂದುವರಿದಿದೆ. ನಾನು ಗುಣಮುಖ ಆಗಲೆಂದು ನೀವೆಲ್ಲರೂ ಮಾಡಿದ ಆಶೀರ್ವಾದ, ಹಾರೈಕೆಗಳಿಗೆ ಋಣಿ. ಇನ್ನು ಕೆಲವೇ ದಿನಗಳಲ್ಲಿ ಗುಣಮುಖ ಆಗುವ ಭರವಸೆ ಇದೆ” ಎಂದಿದ್ದಾರೆ.
Advertisement
Advertisement
“ಕೊರೊನಾ ಸೋಂಕಿತರನ್ನ ಅಪರಾಧಿಗಳ ರೀತಿ ಕಾಣುವುದು, ಸಮಾಜದ ನಿಂದನೆಗೆ ಗುರಿ ಮಾಡುವುದು ಸರಿಯಲ್ಲ. ಇದು ಒಂದು ಯುದ್ಧ, ಕೊರೊನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ. ಮುಖ್ಯವಾಗಿ ಸೋಂಕಿತರು ಕ್ವಾರಂಟೈನ್ ಅವಧಿಯನ್ನು ಮತ್ತು ಸರ್ಕಾರದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಹಾಗೂ ಅದು ನಮ್ಮ ಜವಾಬ್ದಾರಿ” ಎಂದು ಸುಮಲತಾ ತಿಳಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ತಪ್ಪದೆ ಮುಖಕ್ಕೆ ಮಾಸ್ಕ್ ಧರಿಸುವುದನ್ನ ಮರಿಯಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜುಲೈ 6 ರಂದು ಸುಮಲತಾ ಅಂಬರೀಷ್ ತಮಗೆ ಕೊರೊನಾ ಬಂದಿರುವ ಬಗ್ಗೆ ತಿಳಿಸಿದ್ದರು. “ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ನಂತರ ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್‍ಗೆ ಒಳಪಟ್ಟಿದ್ದೇನೆ” ಎಂದು ಫೇಸ್‍ಬುಕ್ ಮೂಲಕ ತಿಳಿಸಿದ್ದರು.