ಕೋಲ್ಕತ್ತಾ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸಂಕಷ್ಟದ ನಡುವೆ ಚುನಾವಣಾ ತಾಲೀಮು ಆರಂಭವಾಗಿದ್ದು, ಬೃಹತ್ ವರ್ಚುವಲ್ ಚುನಾವಣಾ ರ‍್ಯಾಲಿಗಳು ನಡೆಸುವ ಬಗ್ಗೆ ಚಿಂತನೆಗಳು ಶುರುವಾಗಿದೆ.
ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಜುಲೈ 21ರಂದು ಪ್ರತಿವರ್ಷ ಹುತಾತ್ಮರ ದಿನಾಚರಣೆ ಆಚರಿಸುತ್ತಿದ್ದು, ಅಂದು ಬೃಹತ್ ಸಮಾವೇಶ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸಂಕಷ್ಟ ಹಿನ್ನೆಲೆ ವರ್ಚುವಲ್ ತಂತ್ರಜ್ಞಾನದ ಮೂಲಕವೇ ಹುತಾತ್ಮರ ದಿನಾಚರಣೆ ಆಚರಿಸಲು ತಿರ್ಮಾನಿಸಿದೆ. ಅದೇ ಕಾರ್ಯಕ್ರಮದಲ್ಲಿ 2021ರ ವಿಧಾನಸಭೆ ಚುನಾವಣೆ ಪ್ರಚಾರಕ್ಕೂ ಚಾಲನೆ ಸಿಗಲಿದೆ ಎನ್ನಲಾಗಿದೆ.
ಜುಲೈ 21ರಂದು ಮಧ್ಯಾಹ್ನ ಒಂದು ಗಂಟೆಗೆ ಪ್ರತಿ ಬೂತ್ ಮಟ್ಟದಲ್ಲಿ 30 ಕಾರ್ಯಕರ್ತರು ಸೇರಿ ಧ್ವಜ ಹಾರಿಸುವ ಮೂಲಕ ಹುತಾತ್ಮರ ಗೌರವ ಸಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಬಳಿಕ ಎರಡು ಗಂಟೆಯಿಂದ ಮೂರು ಗಂಟೆವರೆಗೂ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 80 ಸಾವಿರ ಬೂತ್‍ಗಳಿದ್ದು ಸುಮಾರು 2.5 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ಸಕ್ರಿಯವಾಗಿ ಕ್ಯಾಂಪೇನ್ ಆರಂಭಿಸಿದೆ. ಇತ್ತಿಚೇಗೆ ಗೃಹ ಸಚಿವ ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಮೂಲಕ ಜನ ಸಂವಾದ ಹೆಸರಿನಲ್ಲಿ ವರ್ಚುವಲ್ ರ‍್ಯಾಲಿ ನಡೆಸಿದ್ದರು. ಈ ಡಿಜಿಟಲ್ ರ‍್ಯಾಲಿಗಾಗಿ ಪಶ್ಚಿಮ ಬಂಗಾಳದ ಪ್ರಮುಖ ಸ್ಥಳಗಳಲ್ಲಿ 70,000 ಟೆಲಿವಿಷನ್ ಸೆಟ್‍ಗಳನ್ನು ಹಾಕುವ ಮೂಲಕ ಲಕ್ಷಾಂತರ ಜನರು ಭಾಷಣ ಕೇಳಲು ಅನುವು ಮಾಡಿಕೊಡಲಾಗಿತ್ತು.
ಈ ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭೆಗೂ ಚುನಾವಣೆ ನಡೆಯಲಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ವರ್ಚುವಲ್ ರ‍್ಯಾಲಿಗಳು ಅತಿಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವ ಸಾಧ್ಯತೆಗಳಿದೆ ಎನ್ನಲಾಗಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳು ಪೂರ್ವ ತಯಾರಿ ಆರಂಭಿಸಿವೆ.