ಬೆಂಗಳೂರು: ಕೊರೊನಾ ಸಂಕಷ್ಟದಲ್ಲೂ ಎಲ್ಲಾ ವರ್ಗಗಳ, ಸಮುದಾಯಗಳ, ವಲಯಗಳ ಅಭಿವೃದ್ಧಿಗಾಗಿ ದೂರದೃಷ್ಠಿಯುಳ್ಳ, ಅತ್ಯತ್ತಮವಾದ ಹಾಗೂ ಜನಪರವಾದ ಬಜೆಟ್‍ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಈ ಬಜೆಟ್‍ನ್ನು ಮುಕ್ತಕಂಠದಿಂದ ಸ್ವಾಗತಿಸುವುದಾಗಿ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
ಬಡವರ, ಪರಿಶಿಷ್ಟರ, ಕೃಷಿಕರ, ಕಾರ್ಮಿಕರ ಕಲ್ಯಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಹಲವಾರು ಅಭಿವೃದ್ಧಿ ಕ್ಷೇತ್ರಗಳಿಗೆ ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚಿನ ಒತ್ತು ಕೊಡಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ಮೀಸಲಿಡಲಾಗಿದೆ. ಕೋವಿಡ್ ಹೆಮ್ಮಾರಿಯನ್ನು ತಡೆಗಟ್ಟಲು ಈ ಬಾರಿಯ ಬಜೆಟ್ ವಿಶೇಷ ಗಮನ ನೀಡಿದೆ. 11,000 ಕಿಮೀ. ಹೆಚ್ಚುವರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, 650 ಕಿ.ಮೀ. ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಉನ್ನತೀಕರಿಸಲು ಅನುದಾನ ಮೀಸಲಿರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾವಂತ ನಿರುದ್ಯೋಗಗಳಿಗೆ ಉದ್ಯೋಗ ನೀಡುವ ಸದುದ್ದೇಶದಿಂದ 7 ಹೊಸ ಟೆಕ್ಸ್‍ಟೈಲ್ಸ್ ಸ್ಥಾಪನೆ, ಹಾಗೂ ಕೌಶಲ್ಯಾಭಿವೃದ್ಧಿ ಯೋಜನೆಯಡಿ ತರಬೇತಿ ನೀಡಲು 3000 ಕೋಟಿ ರೂ. ಮೀಸಲು. ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದ್ದು, 15000 ಶಾಲೆಗಳನ್ನು ಮೇಲ್ದರ್ಜೆಗೇರಿಸುವುದು, ಗಿರಿಜನ ಪ್ರಂದೇಶಗಳಲ್ಲಿ 750 ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆ, 100 ಹೊಸ ಸೈನಿಕ ಶಾಲೆಗಳ ಸ್ಥಾಪನೆಯ ಗುರಿ ಹೊಂದಿದ್ದು, ಐತಿಹಾಸಿಕ ವಿಷಯವಾಗಿದೆ. ಕೃಷಿ ಕ್ಷೇತ್ರವನ್ನು ಸಬಲಗೊಳಿಸಲು ಹಾಗೂ ಕೃಷಿ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ದೊರಕಿಸುವ ಸಲುವಾಗಿ 1000 ಎ.ಪಿ.ಎಂ.ಸಿ.ಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ವ್ಯವಸ್ಥೆ ಹಾಗೂ ಬೆಂಬಲ ಬೆಲೆ (ಎಂ.ಎಸ್.ಪಿ.) ಅಡಿ ಸರ್ಕಾರದಿಂದಲೇ ಧಾನ್ಯಗಳ ಖರೀದಿಗೆ ನಿರ್ಧರಿಸಿದೆ ಎಂದಿದ್ದಾರೆ.
ಅಸಂಘಟಿತ ಕಾರ್ಮಿಕರಿಗೆ ಇ.ಎಸ್.ಐ. ಸೌಲಭ್ಯ, ಕನಿಷ್ಠ ವೇತನ ಕಾಯಿದೆ ಸೌಲಭ್ಯ ಜಾರಿಗೊಳಿಸುವ ಮೂಲಕ ಕಾರ್ಮಿಕ ಹಿತ ಕಾಯಲು ಗುರಿಹೊಂದಲಾಗಿದೆ. ಕ್ಷೇತ್ರ ಸಂಪರ್ಕ ವ್ಯವಸ್ಥೆ, ನಗರ ಪ್ರದೇಶಗಳ ಸಾರಿಗೆ ಸಂಪರ್ಕ ಅಭಿವೃದ್ಧಿ ಪಡಿಸಲು ಗಮನ ನೀಡಲಾಗಿದೆ. ಮೆಟ್ರೋ ವಿಸ್ತರಣೆಗೆ ಹೆಚ್ಚು ಒತ್ತು ನೀಡಲಾಗಿದೆ. ಬೆಂಗಳೂರು ನಗರಕ್ಕೆ ಇನ್ನೂ 2 ಮಾರ್ಗಗಳ ಮೆಟ್ರೋ ರೈಲು ಯೋಜನೆಗೆ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಅತಿಮುಖ್ಯವಾಗಿ ಅಭಿವೃದ್ಧಿ ಅಂಶವೆಂದರೆ ವಸತಿ ಸೌಕರ್ಯಗಳ ವಿತರಣೆ, ಕರ್ನಾಟಕವೂ ಸೇರಿದಂತೆ ಈಗ ಕೈಗೊಳ್ಳಲಾಗಿರುವ ವಸತಿ ಕಾರ್ಯಯೋಜನೆಗಳಿಗೆ ಹೆಚ್ಚು ಅನುದಾನ ದೊರಕಲಿದೆ. ತೆರಿಗೆ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜಿ.ಎಸ್.ಟಿ. ಯನ್ನು ಬಿಗಿಗೊಳಿಸಿ ಆದಾಯ ಹೆಚ್ಚಳಕ್ಕೆ ಕ್ರಮವಹಿಸಿದೆ.